
ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಅಧ್ಯಕ್ಷ ಟ್ರಂಪ್ ಅವರೊಂದಿಗೆ 35 ನಿಮಿಷಗಳ ದೂರವಾಣಿ ಸಂಭಾಷಣೆಯಲ್ಲಿ, ಪ್ರಧಾನಿ ಮೋದಿ ಅವರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ವಿರುದ್ಧ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ಬಗ್ಗೆ ಅಮೆರಿಕ ಅಧ್ಯಕ್ಷರಿಗೆ ವಿವರಿಸಿದ್ದಾರೆ.
ಕಳೆದ ತಿಂಗಳು ಆಪರೇಷನ್ ಸಿಂಧೂರ್‌ನಲ್ಲಿ ವಿರಾಮದ ನಂತರ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಮೊದಲ ಸಂಭಾಷಣೆ ಇದಾಗಿತ್ತು.
"ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಚರ್ಚಿಸಲಾಗಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಭವಿಷ್ಯದಲ್ಲಿ ಅಂತಹ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಅವರು ಕಠಿಣ ಸಂದೇಶ ರವಾನಿಸಿದ್ದಾರೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಪ್ರಧಾನಿ ಮೋದಿ-ಅಧ್ಯಕ್ಷ ಟ್ರಂಪ್ ಫೋನ್ ಕರೆಯ ಕುರಿತು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿ-7 ಸಭೆಯಲ್ಲಿ ಭಾಗವಹಿಸಿದ ಬಳಿಕ ಕೆನಡಾದಿಂದ ಹಿಂದಿರುಗುವ ಪ್ರಯಾಣದಲ್ಲಿ ಅಮೆರಿಕಕ್ಕೆ ಭೇಟಿ ನೀಡಲು ಅಧ್ಯಕ್ಷ ಟ್ರಂಪ್ ಆಹ್ವಾನಿಸಿದ್ದಾರೆ ಆದರೆ, ಪೂರ್ವನಿಗದಿತ ವೇಳಾಪಟ್ಟಿಯಿಂದಾಗಿ ಪ್ರಧಾನಿ ಮೋದಿ ಅವರು ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಅಲ್ಲದೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್ ಅವರನ್ನು ಆಹ್ವಾನಿಸಿದರು ಎಂದು ತಿಳಿದುಬಂದಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಿ-7 ಸಭೆಯನ್ನು ಮಧ್ಯದಲ್ಲಿಯೇ ತೊರೆದು ವಾಪಸ್ ಅಮೆರಿಕಾಗೆ ತೆರಳಿದರು. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಅಧ್ಯಕ್ಷ ಟ್ರಂಪ್ ತಮ್ಮ ಸಂತಾಪ ಸೂಚಿಸಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸಿದಾಗ ಇಬ್ಬರೂ ನಾಯಕರು ಮಾತನಾಡಿದ್ದರು.
Advertisement