
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಔತಣಕೂಟ ಆಯೋಜಿಸಿದ ನಂತರ ಗುರುವಾರ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದು ಭಾರತೀಯ ರಾಜತಾಂತ್ರಿಕತೆಗೆ "ದೊಡ್ಡ ಹಿನ್ನಡೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪಾಕಿಸ್ತಾನ ದೇಶದ ಮುಖ್ಯಸ್ಥ ಅಥವಾ ಸರ್ಕಾರದ ಮುಖ್ಯಸ್ಥರಲ್ಲ. ಅವರು ಕೇವಲ ಸೇನಾ ಮುಖ್ಯಸ್ಥರಾಗಿದ್ದಾರೆ. ಆದರೆ ಅವರನ್ನು ಟ್ರಂಪ್, ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸುತ್ತಾರೆ ಮತ್ತು ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಇದೇ ವ್ಯಕ್ತಿ(ಮುನೀರ್) ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಜೈರಾಮ್ ರಮೇಶ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಇದು ಭಾರತೀಯ ರಾಜತಾಂತ್ರಿಕತೆಗೆ ಮತ್ತು ಆಲಿಂಗನಕ್ಕೂ ದೊಡ್ಡ ಹೊಡೆತವಾಗಿದೆ" ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಟೀಕಿಸಿದ್ದಾರೆ.
ಬುಧವಾರ ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಅವರಿಗೆ ಟ್ರಂಪ್ ಔತಣ ಕೂಟ ಏರ್ಪಡಿಸಿದ್ದರು. ಇರಾನ್ ಮೇಲೆ ಇಸ್ರೇಲ್ ತನ್ನ ಮಿಲಿಟರಿ ದಾಳಿಯನ್ನು ತೀವ್ರಗೊಳಿಸುತ್ತಿರುವ ಸಮಯದಲ್ಲಿ ಈ ಭೇಟಿ ನಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇನ್ನು ಫೀಲ್ಡ್ ಮಾರ್ಶಲ್ ಮುನೀರ್ ಅವರನ್ನು ಶ್ವೇತಭವನದ ಔತಣಕೂಟಕ್ಕೆ ಆಹ್ವಾನಿಸಿರುವುದು ಪಾಕಿಸ್ತಾನದ ಪಾಲಿಗೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಪಾಕಿಸ್ತಾನದ ಸುದ್ದಿ ಪತ್ರಿಕೆ ಡಾನ್ ವಿಶ್ಲೇಷಿಸಿದೆ.
Advertisement