
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಕಾಂಗ್ರೆಸ್ ಪರ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
5,000 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳು ಇಸ್ಲಾಮಿಕ್ ದೇಶಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅಸ್ಸಾಂ ಕಾಂಗ್ರೆಸ್ ಪರವಾಗಿ ಸಕ್ರಿಯವಾಗಿವೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳಿದ್ದು ಒಟ್ಟು 47 ದೇಶಗಳಿಂದ ಹುಟ್ಟಿಕೊಂಡಿರುವ ಈ ಖಾತೆಗಳು ಕಳೆದ ಒಂದು ತಿಂಗಳಿನಿಂದ ನಿರ್ದಿಷ್ಟ ಅಸ್ಸಾಂ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ರಾಜ್ಯ ಘಟಕದ ಪುಟಗಳ ಮೇಲೆ ಸಕಾರಾತ್ಮಕವಾಗಿ ಕೇಂದ್ರೀಕರಿಸುತ್ತಿವೆ ಎಂದು ಹೇಳಿದ್ದಾರೆ.
"ಅವರು ರಾಹುಲ್ ಗಾಂಧಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅವರ ಪೋಸ್ಟ್‌ಗಳ ಬಗ್ಗೆ ಕಾಮೆಂಟ್ ಮಾಡದಿರುವುದು ಅಥವಾ ಲೈಕ್ ಮಾಡದೇ ಇರುವುದು ಆಶ್ಚರ್ಯಕರವಾಗಿದೆ. ಅವರು ನಿರ್ದಿಷ್ಟ ನಾಯಕ ಮತ್ತು ಅಸ್ಸಾಂ ಕಾಂಗ್ರೆಸ್ ಮೇಲೆ ಮಾತ್ರ ಕೇಂದ್ರೀಕರಿಸಿದ್ದಾರೆ" ಎಂದು ಶರ್ಮಾ ಹೇಳಿದ್ದಾರೆ.
ಅಸ್ಸಾಂ ಜೊತೆಗೆ, ಪ್ಯಾಲೆಸ್ಟೈನ್ ಪರ, ಇರಾನ್ ಮತ್ತು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಪ್ರೊ. ಎಂ.ಡಿ. ಯೂನಸ್ ಸೇರಿದಂತೆ ಇಸ್ಲಾಮಿಕ್ ಮೂಲಭೂತವಾದಿ ವಿಷಯವನ್ನು ಪೋಸ್ಟ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ಹೆಸರನ್ನು ಹೇಳದೇ, ಗೌರವ್ ಗೊಗೊಯ್ ಅವರನ್ನು ತಮ್ಮ ಆರೋಪಗಳಲ್ಲಿ ಉಲ್ಲೇಖಿಸಿದ್ದಾರೆ.
"ಪಕ್ಷದ ನಾಯಕತ್ವದಲ್ಲಿನ ಬದಲಾವಣೆಯ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ, ಆದರೆ ಈ ಬೆಳವಣಿಗೆ ಕಳೆದ ತಿಂಗಳಲ್ಲಿ ನಡೆದಿದೆ" ಎಂದು ಶರ್ಮಾ ಹೇಳಿದ್ದಾರೆ. '2026 ರ ವಿಧಾನಸಭಾ ಚುನಾವಣೆಗೆ ಮುನ್ನ ಅಸ್ಸಾಂ ರಾಜಕೀಯದಲ್ಲಿ ಮೊದಲ ಬಾರಿಗೆ ವಿದೇಶಿ ಒಳಗೊಳ್ಳುವಿಕೆ ಕಂಡುಬಂದಿದೆ' ಎಂದು ಅವರು ಹೇಳಿದ್ದಾರೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದ್ದು, ಇದನ್ನು "ರಾಷ್ಟ್ರೀಯ ಭದ್ರತೆ" ವಿಷಯ ಎಂದು ಪರಿಗಣಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.
Advertisement