
ನವದೆಹಲಿ: ಇಂಗ್ಲಿಷ್ ಭಾಷೆ 'ಸಬಲೀಕರಣ' 'ನಾಚಿಕೆಗೇಡಿನ' ಭಾಷೆಯಲ್ಲ, ಪ್ರತಿ ಮಗುವಿಗೂ ಕಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಬಡ ಮಕ್ಕಳು ಈ ಭಾಷೆಯನ್ನು ಕಲಿಯುವುದನ್ನು ಇಷ್ಟಪಡಲ್ಲ. ಏಕೆಂದರೆ ಅವರು ಪ್ರಶ್ನೆಗಳನ್ನು ಕೇಳಿ ಸಮಾನತೆಯನ್ನು ಪಡೆಯುವುದನ್ನು ಬಯಸುವುದಿಲ್ಲ ಎಂದು ಆರೋಪಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಇಂಗ್ಲಿಷ್ ಕುರಿತು ಹೇಳಿಕೆ ನೀಡಿದ ಒಂದು ದಿನದ ನಂತರ ರಾಹುಲ್ ಗಾಂಧಿಯವರ ಈ ಹೇಳಿಕೆಗಳು ನೀಡಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಗಾಂಧಿ, ಇಂಗ್ಲಿಷ್ ಅಣೆಕಟ್ಟು ಅಲ್ಲ, ಅದು ಸೇತುವೆ. ಇಂಗ್ಲಿಷ್ ನಾಚಿಕೆಗೇಡಿನದ್ದಲ್ಲ, ಅದು ಸಬಲೀಕರಣ. ಇಂಗ್ಲಿಷ್ ಸರಪಳಿಯಲ್ಲ, ಅದು ಸರಪಳಿಗಳನ್ನು ಮುರಿಯುವ ಸಾಧನವಾಗಿದೆ ಎಂದು ಹೇಳಿದರು.
ಇಂದಿನ ಜಗತ್ತಿನಲ್ಲಿ ಮಾತೃಭಾಷೆಯಷ್ಟೇ ಇಂಗ್ಲೀಷ್ ಸಹ ಮುಖ್ಯವಾಗಿದೆ. ಏಕೆಂದರೆ ಅದು ಉದ್ಯೋಗವನ್ನು ಒದಗಿಸುತ್ತದೆ. ಒಬ್ಬರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಭಾರತದ ಪ್ರತಿಯೊಂದು ಭಾಷೆಗೂ ಆತ್ಮ, ಸಂಸ್ಕೃತಿ, ಜ್ಞಾನವಿದೆ. ನಾವು ಅವುಗಳನ್ನು ಪಾಲಿಸಬೇಕು. ಅದೇ ಸಮಯದಲ್ಲಿ ಪ್ರತಿ ಮಗುವಿಗೆ ಇಂಗ್ಲಿಷ್ ಕಲಿಸಬೇಕು. ಇದು ಪ್ರಪಂಚದೊಂದಿಗೆ ಸ್ಪರ್ಧಿಸುವ, ಪ್ರತಿ ಮಗುವಿಗೂ ಸಮಾನ ಅವಕಾಶವನ್ನು ನೀಡುವ ಭಾರತಕ್ಕೆ ದಾರಿ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
Advertisement