
ಪಾಟ್ನಾ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಶನಿವಾರ ತಮ್ಮ "ಪಿಕ್‌ಪಾಕೆಟ್" ಟೀಕೆಯನ್ನು ಮುಂದುವರೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಮಾತನಾಡಿದ ರ‍್ಯಾಲಿಗಳಿಗೆ ಇದುವರೆಗೆ 20,000 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕೂಡ ತನ್ನ ಪ್ರತಿದಾಳಿಯನ್ನು ಚುರುಕುಗೊಳಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಬಣವನ್ನು ಮುನ್ನಡೆಸುತ್ತಿರುವ ವಿರೋಧ ಪಕ್ಷದ ನಾಯಕನನ್ನು ಕೀಳಾಗಿ ಚಿತ್ರಿಸಿ, "ಮೇರಾ ಬಾಪ್ ಚಾರಾ ಚೋರ್, ಮುಝೆ ವೋಟ್ ದೋ" (ನನ್ನ ತಂದೆ ದನಗಳಿಗೆ ಮೀಸಲಾದ ಮೇವನ್ನು ಕದ್ದಿದ್ದಾರೆ, ನನಗೆ ಮತ ಹಾಕಿ) ಎಂಬ ಘೋಷಣೆ ಹೊಂದಿರುವ ಪೋಸ್ಟರ್‌ಗಳನ್ನು ರಾಜ್ಯ ರಾಜಧಾನಿಯಾದ್ಯಂತ ಹಾಕಲಾಗಿದೆ.
ಒಂದು ದಿನದ ಹಿಂದೆ ವಂದೇ ಭಾರತ್ ರೈಲಿನ ದುಬಾರಿ ಟಿಕೆಟ್ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ತೇಜಸ್ವಿ ಯಾದವ್, ಪಿಕ್‌ಪಾಕೆಟ್ ಮೋದಿ ಸರ್ಕಾರ ಎಂದು ಟೀಕಿಸಿದ್ದರು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮತ್ತೆ ಅದೇ ಅಭಿವ್ಯಕ್ತಿಯನ್ನು ಬಳಸಿದ್ದಾರೆ.
2014 ರಿಂದ ಬಿಹಾರದಲ್ಲಿ ಮೋದಿಯ ಪ್ರತಿ ರ‍್ಯಾಲಿಗಳಿಗೆ "100 ಕೋಟಿ ರೂ." ವೆಚ್ಚ ಮಾಡಲಾಗಿದೆ ಮತ್ತು ಇಲ್ಲಿಯವರೆಗೆ "200 ಅಂತಹ ಸಾರ್ವಜನಿಕ ರ‍್ಯಾಲಿಗಳು" ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
"ಆದ್ದರಿಂದ ಐದು ಚುನಾವಣೆಗಳನ್ನು(ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಚುನಾವಣೆಗಳು) ಕಂಡ ಈ ಅವಧಿಯಲ್ಲಿ ಮೋದಿ ರ‍್ಯಾಲಿಗಳಿಗಾಗಿ ಒಟ್ಟು 20,000 ಕೋಟಿ ರೂ. ಖರ್ಚು ಮಾಡಲಾಗಿದೆ ಮತ್ತು ಈ ರ‍್ಯಾಲಿಗಳನ್ನು ಸರ್ಕಾರ ಆಯೋಜಿಸಿದೆ. ಅವರ ಉದ್ದೇಶವು ಸ್ಪಷ್ಟವಾಗಿ ಚುನಾವಣಾ ಉದ್ದೇಶವಾಗಿತ್ತು" ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಗಮನಾರ್ಹ ವಿಚಾರ ಎಂದರೆ, ಮೋದಿ ಶುಕ್ರವಾರ ಸಿವಾನ್ ಜಿಲ್ಲೆಯಲ್ಲಿದ್ದರು. ಇದು ಈ ವರ್ಷ ಬಿಹಾರಕ್ಕೆ ಅವರ ಐದನೇ ಭೇಟಿಯಾಗಿದೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಭೇಟಿಯಾಗಿದೆ ಮತ್ತು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ "51ನೇ ಭೇಟಿ" ಎಂದು ಹೇಳಲಾಗುತ್ತಿದೆ.
Advertisement