
ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿಯಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ತೀವ್ರ ಪರಿಣಾಮ ಬೀರಿದ್ದು, 48 ವಿಮಾನಗಳ ಸಂಚಾರ ರದ್ದು ಆಗಿದೆ ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ದೆಹಲಿಯಿಂದ ಹೊರಡಬೇಕಾಗಿದ್ದ ಏರ್ ಇಂಡಿಯಾ ಹಾಗೂ ಇಂಡಿಗೊ ವಿಮಾನಯಾನ ಸಂಸ್ಥೆಗಳ 20 ವಿಮಾನಗಳು ಹಾಗೂ ಆಗಮಿಸಬೇಕಾಗಿದ್ದ 28 ವಿಮಾನಗಳ ಸೇವೆ ರದ್ದುಗೊಂಡಿದ್ದು, ಕಂಪನಿಗಳು ನಷ್ಟ ಅನುಭವಿಸುವಂತಾಗಿದೆ.
ಏರ್ ಇಂಡಿಯಾದ 17 ಆಗಮನ ಮತ್ತು 10 ನಿರ್ಗಮನ ವಿಮಾನಗಳು ಸೇರಿದಂತೆ ಒಟ್ಟಾರೇ 25 ವಿಮಾನಗಳ ಹಾರಾಟ ರದ್ದುಗೊಂಡಿದೆ. ಇಂಡಿಗೋದ 8 ಆಗಮಿಸಬೇಕಾದ ಹಾಗೂ 7 ಹೊರಡಬೇಕಾಗಿದ್ದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಗ್ಲೋಬಲ್ ಕ್ಯಾರಿಯರ್ಸ್ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳು ಆರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಈ ಮಧ್ಯೆ ಕತಾರ್ ಮತ್ತು ಗಲ್ಫ್ ಪ್ರದೇಶದ ಕೆಲವು ಭಾಗಗಳಲ್ಲಿ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಸೋಮವಾರ ದೇಶದ ಹಲವಾರು ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಇದರಲ್ಲಿ ಅಹಮದಾಬಾದ್, ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿವೆ.
ಅಲ್ಲದೇ ಲಖನೌದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭಾವ್ಯ ವಿಮಾನಗಳ ವಿಳಂಬ ಮತ್ತು ರದ್ದತಿ ಬಗ್ಗೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
Advertisement