
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಪಕ್ಷದ ನಾಯಕ ಶಶಿ ತರೂರ್ ಅವರನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ ಕೆಲವೇ ಗಂಟೆಗಳ ನಂತರ, ತಿರುವನಂತಪುರಂ ಸಂಸದರು X ನಲ್ಲಿ ಮಾಡಿರುವ ಪೋಸ್ಟ್ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಶಶಿ ತರೂರ್ ಅವರ ಪೋಸ್ಟ್ ತಮ್ಮದೇ ಪಕ್ಷದ ಸಹೋದ್ಯೋಗಿಗಳ ವಾಗ್ದಾಳಿಗೆ ಉತ್ತರವಾಗಿ ಕಂಡುಬಂದಿದೆ. "ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು. ಮತ್ತು ಆಕಾಶ ಯಾರಿಗೂ ಸೇರಿಲ್ಲ" ಎಂದು ಪಕ್ಷಿಯ ಛಾಯಾಚಿತ್ರದೊಂದಿಗೆ ಸಂದೇಶವನ್ನು ಶಶಿ ತರೂರ್ ಪ್ರಕಟಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ತರೂರ್ ಬಗ್ಗೆ ಮಾತನಾಡಿದ ಪಕ್ಷದ ಮುಖ್ಯಸ್ಥ ಖರ್ಗೆ, "ನಮಗೆ ಮೊದಲು ದೇಶ, ಆದರೆ ಕೆಲವು ಜನರಿಗೆ, ಮೊದಲು ಮೋದಿ" ಎಂದು ಟೀಕಿಸಿದ್ದಾರೆ. ಈ ಬೆಳವಣಿಗೆ ಪಕ್ಷದಲ್ಲೇ ತರೂರ್‌ಗೆ ಅತ್ಯಂತ ಬಲವಾದ ತಿರಸ್ಕಾರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮೊದಲು, ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ ನಂತರ ಅವರ ಹೇಳಿಕೆಗಳಿಗಾಗಿ ತರೂರ್ ಬಗ್ಗೆ ಪಕ್ಷದ ಸಹೋದ್ಯೋಗಿಗಳು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆಪರೇಷನ್ ಸಿಂದೂರ್ ನಂತರ ಭಾರತದ ಸಂಪರ್ಕದ ಕುರಿತು ತರೂರ್ ಬರೆದ ಲೇಖನದ ಬಗ್ಗೆ ಭಾರಿ ಚರ್ಚೆಯ ನಡುವೆಯೇ ಖರ್ಗೆ ಅವರ ಈ ಹೇಳಿಕೆಗಳು ಬಂದಿವೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, ಪ್ರಧಾನಿ ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ "ಪ್ರಮುಖ ಆಸ್ತಿ"ಯಾಗಿ ಉಳಿದಿದೆ ಆದರೆ ಹೆಚ್ಚಿನ ಬೆಂಬಲಕ್ಕೆ ಅರ್ಹವಾಗಿದೆ ಎಂದು ಶಶಿ ತರೂರ್ ಹೇಳಿದ್ದಾರೆ. ಅವರ ಹೇಳಿಕೆಗಳು ಕಾಂಗ್ರೆಸ್ ನ್ನು ಕೆರಳಿಸಿದ್ದು ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಾಜಿ ರಾಜತಾಂತ್ರಿಕನ ನಡುವಿನ ಬಿರುಕು ಹೆಚ್ಚಿಸಿದೆ.
ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತರೂರ್ ತಮ್ಮ ಲೇಖನವು ಬಿಜೆಪಿಗೆ "ಸೇರಲು ಹಾರುತ್ತಿರುವ" ಸಂಕೇತವಲ್ಲ, ಬದಲಿಗೆ ರಾಷ್ಟ್ರೀಯ ಏಕತೆ, ಆಸಕ್ತಿ ಮತ್ತು ಭಾರತಕ್ಕಾಗಿ ನಿಲ್ಲುವ ಹೇಳಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು.
Advertisement