
ನವದೆಹಲಿ: ಮುಂದಿನ ವರ್ಷದಿಂದ 10ನೇ ತರಗತಿಯ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ಅವಧಿಯಲ್ಲಿ ಎರಡು ಬಾರಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ಬರೆಯಬೇಕು. ಆದರೆ ಫೆಬ್ರವರಿಯಲ್ಲಿ ನಡೆಯುವ ಮೊದಲ ಹಂತದ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ನಿಗದಿಪಡಿಸಲಾದ ಎರಡನೇ ಹಂತದ ಪರೀಕ್ಷೆಯು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 10ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮಾನದಂಡಗಳನ್ನು ಅನುಮೋದಿಸಿದೆ ಮತ್ತು ಈ ಕ್ರಮವನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ) ಶಿಫಾರಸು ಮಾಡಲಾಗಿದೆ.
ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವನ್ನು ಮೇನಲ್ಲಿ ನಡೆಸಲಾಗುವುದು. ಎರಡು ಹಂತಗಳ ಫಲಿತಾಂಶ ಕ್ರಮವಾಗಿ ಏಪ್ರಿಲ್ ಮತ್ತು ಜೂನ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಅವರು ತಿಳಿಸಿದ್ದಾರೆ.
ಮೊದಲ ಹಂತಕ್ಕೆ(ವಿದ್ಯಾರ್ಥಿಗಳು) ಹಾಜರಾಗುವುದು ಕಡ್ಡಾಯವಾಗಿರುತ್ತದೆ ಮತ್ತು ಎರಡನೇ ಹಂತವು ಐಚ್ಛಿಕವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯ ಹೊರತುಪಡಿಸಿ ಇತರೆ ಯಾವುದೇ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
Advertisement