
ನವದೆಹಲಿ: ದೇಶದಲ್ಲಿ ಈಗ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ‘ಸಂವಿಧಾನ ಬಚಾವೋ ಯಾತ್ರೆ’ಯಿಂದ ದಿಕ್ಕೆಟ್ಟಿದ್ದ ಬಿಜೆಪಿ 50 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡತೊಡಗಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗದವರೂ ನಿರುದ್ಯೋಗ, ಹಣದುಬ್ಬರ, ನೋಟು ಅಮಾನ್ಯೀಕರಣದಂತಹ ಸಮಸ್ಯೆಗಳ ಬಗ್ಗೆ ಉತ್ತರ ನೀಡಲಾಗದವರು ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಹಾಗೂ ಪದೇ ಪದೇ ಸುಳ್ಳುಗಳನ್ನು ಹೇಳಿ ಸಂವಿಧಾನ ಹತ್ಯೆ ದಿವಸ್ ಅಂತಾ ಆಚರಿಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ತುರ್ತು ಪರಿಸ್ಥಿತಿಯ 50ನೇ ವರ್ಷವನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸುವಂತೆ ಎಲ್ಲ ರಾಜ್ಯಗಳಿಗೂ ಪ್ರಧಾನಿ ಮೋದಿ ಸರ್ಕಾರದ ಪರವಾಗಿ ಸುತ್ತೋಲೆ ಹೊರಡಿಸಿದ್ದಾರೆ. ಈಗ ಸಂವಿಧಾನ ಉಳಿಸುವ ಬಗ್ಗೆ ಮಾತನಾಡುತ್ತಿರುವವರು ಮುಗಿದು ಹೋಗಿರುವ ವಿಚಾರವನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಕೊಡುಗೆ ನೀಡದವರು ಈಗ ಸಂವಿಧಾನ ರಚನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement