
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಭಾರೀ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿ ಇಬ್ಬರು ಮೃತಪಟ್ಟು, 23 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮನುನಿ ಖಾದ್‌ನಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದ್ದು, ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನಾ ಸ್ಥಳದ ಬಳಿಯ ಕಾರ್ಮಿಕ ಕಾಲೋನಿಯಲ್ಲಿ ನೆಲೆಸಿದ್ದ ಸುಮಾರು 15-20 ಕಾರ್ಮಿಕರು ಖಾನಿಯಾರ ಮನುನಿ ಖಾದ್‌ನಲ್ಲಿ ದಿಢೀರ್ ನೀರಿನ ಮಟ್ಟ ಏರಿಕೆಯಾಗಿ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಳೆಯಿಂದಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದ್ದ ಪ್ರಾಜೆಕ್ಟ್ ಸ್ಥಳದ ಬಳಿಯ ತಾತ್ಕಾಲಿಕ ಆಶ್ರಯಗಳಲ್ಲಿ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದಾಗ, ಮನುನಿ ಖಾದ್ ಮತ್ತು ಹತ್ತಿರದ ಚರಂಡಿಗಳಿಂದ ಪ್ರವಾಹದ ನೀರು ನೀರು ನುಗ್ಗಿ ಕೊಚ್ಚಿ ಹೋಗಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸ್ಥಳೀಯ ಆಡಳಿತ, ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯ ತಂಡಗಳು ಸ್ಥಳಕ್ಕೆ ತಲುಪಿವೆ. ಈ ಮಧ್ಯೆ, ಕುಲ್ಲು ಜಿಲ್ಲೆಯಲ್ಲಿ ಅನೇಕ ಮೇಘಸ್ಫೋಟಗಳು ದಿಢೀರ್ ಪ್ರವಾಹಕ್ಕೆ ಕಾರಣವಾಗಿ, ಮನೆಗಳು, ರಸ್ತೆಗಳು, ಶಾಲಾ ಕಟ್ಟಡಗಳು ಮತ್ತು ಸಣ್ಣ ಸೇತುವೆಗಳಿಗೆ ವ್ಯಾಪಕ ಹಾನಿಯುಂಟಾಗಿ ಮೂವರು ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.
ಸೈನ್ಜ್‌ನ ಜೀವಾ ನಲ್ಲಾ ಮತ್ತು ರೆಹ್ಲಾ ಬಿಹಾಲ್ ಹಾಗೂ ಗಡ್ಸಾ ಪ್ರದೇಶದ ಶಿಲಾಗಢದಲ್ಲಿ ಮೇಘಸ್ಫೋಟವಾಗಿದೆ. ಸ್ಥಳೀಯ ಅಧಿಕಾರಿಗಳು ಹತ್ತಿರದ ಪ್ರದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ರೆಹ್ಲಾ ಬಿಹಾಲ್‌ನಲ್ಲಿ, ತಮ್ಮ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಹೊರಗೆ ತರಲು ಪ್ರಯತ್ನಿಸುತ್ತಿದ್ದವರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ನಾಪತ್ತೆಯಾಗಿದ್ದಾರೆ.
ಭಾರೀ ಮಳೆಯಿಂದಾಗಿ ನದಿಗಳು ಮತ್ತು ತೊರೆಗಳು ವೇಗವಾಗಿ ಉಕ್ಕಿ ಹರಿಯಲು ಕಾರಣವಾಯಿತು, ಜಿಲ್ಲೆಯಾದ್ಯಂತ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಮುಖ ಆತ್-ಲುಹ್ರಿ-ಸೈಂಜ್ ರಸ್ತೆಯು ನಿರ್ಬಂಧಿಸಲ್ಪಟ್ಟಿತು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು ಮತ್ತು ಹಲವಾರು ಪ್ರದೇಶಗಳಿಗೆ ಪ್ರವೇಶವನ್ನು ಕಡಿತಗೊಳಿಸಲಾಯಿತು.
ಕುಲ್ಲು ಜಿಲ್ಲೆಯ ಮನಾಲಿ ಮತ್ತು ಬಂಜಾರ್ ಪ್ರದೇಶಗಳಲ್ಲಿಯೂ ಪ್ರವಾಹ ಉಂಟಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಇದರ ಜೊತೆಗೆ, ಮಣಿಕರಣ್ ಕಣಿವೆಯಲ್ಲಿ ಬ್ರಹ್ಮ ಗಂಗಾ ನಾಲೆಯಲ್ಲಿ ಹಠಾತ್ ಪ್ರವಾಹದಿಂದ ನೀರು ಹಲವಾರು ಮನೆಗಳಿಗೆ ನುಗ್ಗಿದ್ದು, ಹೆಚ್ಚಿನ ಹಾನಿಯಾಗುವ ಆತಂಕವನ್ನು ಹೆಚ್ಚಿಸಿದೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ನಿರ್ದೇಶಕ ಡಿ.ಸಿ. ರಾಣಾ ಅವರು ಪಾರ್ವತಿ ನದಿ ಉಕ್ಕಿ ಹರಿಯುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಅಥವಾ ದೊಡ್ಡ ಆಸ್ತಿ ನಷ್ಟದ ವರದಿಗಳು ಬಂದಿಲ್ಲ, ಆದರೆ ಮುನ್ನೆಚ್ಚರಿಕೆಯಾಗಿ ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸೈನ್ಜ್, ತಿರ್ಥಾನ್ ಮತ್ತು ಗಡ್ಸಾ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಹಾನಿಯ ಬಗ್ಗೆ ಅನೇಕ ವರದಿಗಳು ಬಂದಿವೆ ಎಂದು ಬಂಜಾರ್ ಶಾಸಕ ಸುರಿಂದರ್ ಶೌರಿ ದೃಢಪಡಿಸಿದರು. ಸಾರ್ವಜನಿಕರು ಜಾಗರೂಕರಾಗಿರಲು ಮತ್ತು ನದಿಗಳು ಮತ್ತು ನಾಲೆಗಳ ಹತ್ತಿರ ಓಡಾಡದಂತೆ ತಪ್ಪಿಸಲು ಅವರು ಒತ್ತಾಯಿಸಿದರು,
ನೆರೆಯ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಭೂಕುಸಿತಗಳು, ತುಂಬಿ ಹರಿಯುವ ಚರಂಡಿಗಳಿಂದಾಗಿ ಕಾಜಾ-ಸಮ್ದೋಹ್ ರಸ್ತೆಯನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಯಾಸ್ ಮತ್ತು ಸಟ್ಲೆಜ್ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ನೀಡಿದೆ. ಕಾಂಗ್ರಾ, ಮಂಡಿ, ಶಿಮ್ಲಾ, ಸಿರ್ಮೌರ್, ಕುಲ್ಲು, ಹಮೀರ್‌ಪುರ, ಸೋಲನ್ ಮತ್ತು ಉನಾ ಜಿಲ್ಲೆಗಳು ಪರಿಣಾಮ ಬೀರುವ ಸಾಧ್ಯತೆಯಿದೆ.
Advertisement