
ಉದ್ಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಅರಣ್ಯ ಪ್ರದೇಶವೊಂದರಲ್ಲಿ ನಾಲ್ವರು ಜೈಶ್ ಇ ಮೊಹಮ್ಮದ್ ಅಡಗಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸುತ್ತಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬಸಂತ್ ಗಢ್ ದ ಬಿಹಾಲಿ ದುರ್ಗಮ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರಿಂದ ಇಂದು ಬೆಳಗ್ಗೆಯಿಂದ ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಾರಿ ಮಳೆ ಮತ್ತು ಹಿಮದ ನಡುವೆ ಭಾರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗ್ಗೆ 8-30ರ ಸುಮಾರಿನಲ್ಲಿ ಉಗ್ರರನ್ನು ಸಂಪರ್ಕಿಸಲು ಸಾಧ್ಯವಾಯಿತು. ನಾಲ್ವರು ಉಗ್ರರು ಇರುವುದಾಗಿ ತಿಳಿದುಬಂದಿದೆ. ಅವರಿಗಾಗಿ ಒಂದು ವರ್ಷದಿಂದ ಶೋಧ ನಡೆಸುತ್ತಿದ್ದೇವು ಎಂದು ಜಮ್ಮು ವಲಯದ ಐಜಿಪಿ ಭೀಮ್ ಸೇನ್ ತುಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ (White Knight Corps) ತನ್ನ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದೆ. ಉಗ್ರರ ವಿರುದ್ಧದ ಈ ಕಾರ್ಯಾಚರಣೆಗೆ ‘ಆಪರೇಷನ್ ಬಿಹಾಲಿ’ ಎಂದು ಹೆಸರಿಡಲಾಗಿದೆ. ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿಯ ಮೇರೆಗೆ ಉಗ್ರರ ಅಡಗುದಾಣದ ಮೇಲೆ ನಾವು ದಾಳಿ ಮಾಡಿದ್ದೇವೆ. ಬಸಂತ್ ಗಢ್ ಗೆ ಜೂ. 26ರ ನಸುಕಿನಲ್ಲೇ ಆಗಮಿಸಿದ್ದ ನಮ್ಮ ಪಡೆ, ಉಗ್ರರ ಇರುವಿಕೆಯನ್ನು ಖಚಿತಪಡಿಸಿಕೊಂಡು ಆನಂತರ ಅವರನ್ನು ಬಂಧಿಸಲು ಮುಂದಾದಾಗ ಗುಂಡಿನ ಚಕಮಕಿ ನಡೆಯಿತು ಎಂದು ವಿವರಿಸಿದೆ.
Advertisement