
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಪಠ್ಯಕ್ರಮ ಪರಿಷ್ಕರಣೆಯಿಂದಾಗಿ ಶೈಕ್ಷಣಿಕ ವಲಯ ವಿಭಜನೆಗೊಂಡಿದೆ. ಇಸ್ಲಾಂ, ಪಾಕಿಸ್ತಾನ, ಚೀನಾ ಕುರಿತ ವಿಷಯಗಳನ್ನು ಸ್ನಾತಕೋತ್ತರ ಪದವಿಯಿಂದ ತೆಗೆದುಹಾಕುವ ದೆಹಲಿ ವಿವಿ ನಿರ್ಧಾರ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಇಸ್ಲಾಂ, ಪಾಕಿಸ್ತಾನ ಮತ್ತು ಚೀನಾ ಕುರಿತ ಸ್ನಾತಕೋತ್ತರ ಪೇಪರ್‌ಗಳನ್ನು ಕೈಬಿಡುವ ನಿರ್ಧಾರದ ನಂತರ ದೆಹಲಿ ವಿಶ್ವವಿದ್ಯಾಲಯ ಭಾರಿ ಟೀಕೆಗೊಳಗಾಗಿದೆ. ಶೈಕ್ಷಣಿಕ ವಿಷಯಗಳ ಸ್ಥಾಯಿ ಸಮಿತಿಯು ಸ್ನಾತಕೋತ್ತರದ ರಾಜ್ಯಶಾಸ್ತ್ರ ಪಠ್ಯಕ್ರಮದಿಂದ ಹಲವಾರು ಪ್ರಸ್ತಾವಿತ ಐಚ್ಛಿಕ ಪತ್ರಿಕೆಗಳನ್ನು ತೆಗೆದುಹಾಕಲು ನಿರ್ಧರಿಸಿದ ನಂತರ ಶೈಕ್ಷಣಿಕ ವಲಯಗಳಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ತೆಗೆದುಹಾಕಲಾದ ವಿಷಯಗಳಲ್ಲಿ ಇಸ್ಲಾಂ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು, ಪಾಕಿಸ್ತಾನ ಮತ್ತು ಪ್ರಪಂಚ, ಸಮಕಾಲೀನ ಜಗತ್ತಿನಲ್ಲಿ ಚೀನಾದ ಪಾತ್ರ ಮತ್ತು ಪಾಕಿಸ್ತಾನ ರಾಜ್ಯ ಮತ್ತು ಸಮಾಜ ಸೇರಿವೆ. ಧಾರ್ಮಿಕ ರಾಷ್ಟ್ರೀಯತೆ ಮತ್ತು ರಾಜಕೀಯ ಹಿಂಸಾಚಾರ ವಿಷಯದ ಮತ್ತೊಂದು ಕೋರ್ಸ್ ಅನ್ನು ಜುಲೈ 1 ರಂದು ನಿಗದಿಪಡಿಸಲಾದ ಮುಂಬರುವ ಸಮಿತಿಯ ಸಭೆಯಲ್ಲಿ ಪರಿಶೀಲನೆಗಾಗಿ ತಡೆಹಿಡಿಯಲಾಗಿದೆ.
ಈ ಕ್ರಮವು ಸಮಿತಿಯ ಹಲವು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರೊಫೆಸರ್ ಮೊನಾಮಿ ಸಿನ್ಹಾ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ, ಬದಲಾವಣೆಯನ್ನು ಸೈದ್ಧಾಂತಿಕ ಸೆನ್ಸಾರ್‌ಶಿಪ್ ಎಂದಿದ್ದಾರೆ. ಅಂತಹ ವಿಷಯ ತೆಗೆದುಹಾಕುವುದು ನಿರ್ಣಾಯಕ ಶೈಕ್ಷಣಿಕ ವಿಚಾರಣೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಮತ್ತು ಚೀನಾವನ್ನು ವಿವರವಾಗಿ ಅಧ್ಯಯನ ಮಾಡುವುದು ಅತ್ಯಗತ್ಯ ಎಂಬುದು ನಮ್ಮ ವಾದವಾಗಿದೆ. ಈ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದಿದ್ದಾರೆ. ಆಯ್ದು ವಿಷಯಗಳ ಸೇರ್ಪಡೆಯನ್ನು ಸಮಿತಿ ಸದಸ್ಯ ಪ್ರೊಫೆಸರ್ ಹರೇಂದ್ರ ತಿವಾರಿ ಪ್ರಶ್ನಿಸಿದ್ದಾರೆ.
ಹಿಂದೂ ಅಥವಾ ಸಿಖ್ ವಿಚಾರವನ್ನು ಯಾಕೆ ತೆಗೆಯುತ್ತಿಲ್ಲ?
ಇಸ್ಲಾಂ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಷಯಗಳನ್ನು ಮಾತ್ರ ಯಾಕೆ ತೆಗೆಯಲಾಗುತ್ತಿದೆ? ಹಿಂದೂ ಅಥವಾ ಸಿಖ್ ವಿಚಾರವನ್ನು ಯಾಕೆ ತೆಗೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜುಲೈ 1ರಂದು ಸಮಿತಿ ಸಭೆ:
ಪಠ್ಯಕ್ರಮದ ವಿಚಾರಗಳನ್ನು ಇನ್ನೂ ಅಂತಿಮಗೊಂಡಿಲ್ಲ. ಜುಲೈ 1 ರಂದು ನಡೆಯಲಿರುವ ಸಭೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಕುರಿತು ಮತ್ತಷ್ಟು ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ಸಮಸ್ಯೆ ಸಮಿತಿಯೊಳಗೆ ವಿಭಜನೆ ಮಾತ್ರವಲ್ಲದೇ ಶೈಕ್ಷಣಿಕ ಸ್ವಾತಂತ್ರ್ಯ, ಒಳಗೊಳ್ಳುವಿಕೆ ಮತ್ತು ಉನ್ನತ ಶಿಕ್ಷಣದಲ್ಲಿ ರಾಜಕೀಯ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮ ವಿವಾದ ಅಂತಿಮವಾಗಿ ಯಾವ ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾಯುತ್ತಿದ್ದಾರೆ.
Advertisement