
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಪಕ್ಷದ ಉನ್ನತ ನಾಯಕರ ನಡುವಿನ ಬಿರುಕು ಮತ್ತಷ್ಟು ಹೆಚ್ಚುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್, ಪ್ರತಿ ಪೋಸ್ಟ್ ಗಳ ಮೂಲಕ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿಯೇ ಮೊದಲು” ಎಂದು ತರೂರ್ ಅವರನ್ನು ಟೀಕಿಸಿದ ಒಂದು ದಿನದ ನಂತರ, ತಿರುವನಂತಪುರಂ ಸಂಸದ ಸಾಮಾಜಿಕ ಮಾಧ್ಯಮದಲ್ಲಿ ಹಾರುತ್ತಿರುವ ಹಕ್ಕಿಯ ಫೋಟೋವನ್ನು ಹಂಚಿಕೊಂಡು, 'ರೆಕ್ಕೆ ನಿಮ್ಮದು, ಹಾರಲು ಯಾರ ಅನುಮತಿಯೂ ಬೇಕಾಗಿಲ್ಲ. ಆಕಾಶ ಯಾರದ್ದೂ ಅಲ್ಲ' ಎಂದು ಬರೆದಿದ್ದರು.
ಈಗ ಶಶಿ ತರೂರ್ ಪೋಸ್ಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು, "ಹಾರಲು ಅನುಮತಿ ಕೇಳಬೇಡಿ. ಪಕ್ಷಿಗಳು ಮೇಲೆ ಹಾರಲು ಅನುಮತಿ ಅಗತ್ಯವಿಲ್ಲ ನಿಜ. ಆದರೆ ಇಂದು, ಸ್ವತಂತ್ರ ಹಕ್ಕಿ ಕೂಡ ಆಕಾಶದಲ್ಲಿ ಹಾರಬೇಕಾದರೆ ಹುಷಾರಾಗಿರಬೇಕು. ಏಕೆಂದರೆ, ಗಿಡುಗಗಳು, ರಣಹದ್ದುಗಳು ಮತ್ತು ‘ಹದ್ದುಗಳು’ ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ್ಯ ಮುಕ್ತವಲ್ಲ” ಎಂದು ಎಚ್ಚರಿಸಿದ್ದಾರೆ.
ಟಾಗೋರ್ ಅವರ ಪೋಸ್ಟ್‌ನಲ್ಲಿ ಪರಭಕ್ಷಕ ಪಕ್ಷಿಗಳ ಚಿತ್ರಗಳೂ ಇವೆ. ಇದು ಪಕ್ಷದೊಳಗಿನ ಆಂತರಿಕ ಉದ್ವಿಗ್ನತೆಯನ್ನು ಸೂಚಿಸುತ್ತದೆ.
Advertisement