
ಕುಲ್ಲು: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಭಾರಿ ಪ್ರವಾಹಕ್ಕೆ ಸಿಲುಕಿ ಕನಿಷ್ಠ ಐವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಜನ ಕಾಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಗುರುವಾರ ದೃಢಪಡಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಉಂಟಾದ ಭಾರೀ ಮಳೆ ಮತ್ತು ಹಠಾತ್ ಪ್ರವಾಹ ಕುಲ್ಲು ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಅಪಾರ ಹಾನಿಯನ್ನುಂಟುಮಾಡಿದ್ದು, ಮನೆಗಳು, ರಸ್ತೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ.
ANI ಜೊತೆ ಮಾತನಾಡಿದ ಸಿಎಂ ಸುಖು, ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಐದು ಸಾವು ಮತ್ತು ಐದು ಮಂದಿ ಕಾಣೆಯಾಗಿರುವುದನ್ನು ದೃಢಪಡಿಸಿದ್ದಾರೆ. ಕುಲ್ಲು ಜಿಲ್ಲೆಯಲ್ಲಿ ಮೂವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ" ಎಂದು ಅವರು ತಿಳಿಸಿದ್ದಾರೆ.
ಮೇಘಸ್ಫೋಟದಿಂದಾಗಿ ಕಾಂಗ್ರಾದ ಧರ್ಮಶಾಲಾ ಪ್ರದೇಶ ಮತ್ತು ಹಿಮಾಲಯ ಪ್ರದೇಶದ ಕೆಲವು ಭಾಗಗಳಲ್ಲಿ ಗಮನಾರ್ಹ ಹಾನಿಯಾಗಿದೆ ಎಂದು ಸಿಎಂ ಹೇಳಿದರು.
ಹಿಮಾಚಲ ಪ್ರದೇಶದ ನಾಲ್ಕು ಕಡೆಗಳಲ್ಲಿ ಮೇಘಸ್ಫೋಟವಾಗಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ರಣಪ್ರವಾಹ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಕಾಂಗ್ರಾ ಹಾಗೂ ಕುಲುವಿನ ಸೈನ್ಜ್ ಕಣಿವೆಯಲ್ಲಿ ಪಾರ್ವತಿ ನದಿ ಉಕ್ಕಿ ಹರಿಯುತ್ತಿದೆ.
ಮಣಿಕರಣ್-ಸೈಂಜ್-ಬಂಜರ್ ಕಣಿವೆಗಳು ದ್ವೀಪಗಳಾಗಿವೆ. ಪ್ರವಾಸಿತಾಣ ಧರ್ಮಶಾಲಾ ಬಳಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ 15-20 ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ವರದಿಯಾಗಿದೆ. ಇಲ್ಲಿಯವರೆಗೆ, ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಇತ್ತ ಕುಲ್ಲು ಮತ್ತು ಲಾಹೌಲ್ ಜಿಲ್ಲೆಯಲ್ಲಿ ಪ್ರವಾಹದ ರಭಸಕ್ಕೆ ಜೀಪ್ವೊಂದು ಕೊಚ್ಚಿ ಹೋಗುವ ದೃಶ್ಯ ಕಂಡು ಬಂದಿದೆ.
Advertisement