
ನವದೆಹಲಿ: 50 ವರ್ಷಗಳ ಹಿಂದೆ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಗುರುವಾರ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹೊಸಬಾಳೆ, ಹಿಂದಿನ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಿದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಎರಡು ಪದಗಳನ್ನು ತೆಗೆದುಹಾಕಬೇಕೆಂದು ಬಲವಾದ ವಾದ ಮಂಡಿಸಿದರು.
ಜೂನ್ 25, 1975 ರಂದು ಘೋಷಿಸಲಾದ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡ ಹೊಸಬಾಳೆ, ಆ ಅವಧಿಯಲ್ಲಿ ಸಾವಿರಾರು ಜನರನ್ನು ಜೈಲಿಗೆ ಹಾಕಲಾಯಿತು ಮತ್ತು ಚಿತ್ರಹಿಂಸೆ ನೀಡಲಾಯಿತು. ಅಲ್ಲದೆ ನ್ಯಾಯಾಂಗ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಸಹ ಮೊಟಕುಗೊಳಿಸಲಾಗಿತ್ತು ಎಂದರು.
ತುರ್ತು ಪರಿಸ್ಥಿತಿಯ ದಿನಗಳು ದೊಡ್ಡ ಪ್ರಮಾಣದಲ್ಲಿ ಬಲವಂತದ ಸಂತಾನಹರಣಕ್ಕೂ ಸಾಕ್ಷಿಯಾದವು ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.
"ಅಂತಹ ಕೆಲಸಗಳನ್ನು ಮಾಡಿದವರು ಇಂದು ಸಂವಿಧಾನದ ಪ್ರತಿಯೊಂದಿಗೆ ತಿರುಗಾಡುತ್ತಿದ್ದಾರೆ. ಅವರು ಇನ್ನೂ ಕ್ಷಮೆಯಾಚಿಸಿಲ್ಲ... ಮೊದಲು ಕ್ಷಮೆಯಾಚಿಸಿ" ಎಂದು ಕಾಂಗ್ರೆಸ್ ಗೆ ಆಗ್ರಹಿಸಿದರು.
"ನಿಮ್ಮ ಪೂರ್ವಜರು ತುರ್ತು ಪರಿಸ್ಥಿತಿಯನ್ನು ಹೇರಿದರು... ಇದಕ್ಕಾಗಿ ನೀವು ದೇಶಕ್ಕೆ ಕ್ಷಮೆಯಾಚಿಸಬೇಕು" ಎಂದು ಹೊಸಬಾಳೆ ಒತ್ತಾಯಿಸಿದರು.
Advertisement