
ನಾಡಿಯಾ: ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಪಶ್ಚಿಮ ಬಂಗಾಳಕ್ಕೆ ದೂರದ ನೆದರ್ಲ್ಯಾಂಡ್ಸ್‌ನಿಂದ ಬಂದ ಡಚ್ ಪ್ರಜೆಯೊಬ್ಬರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಗರ್ಲ್ ಫ್ರೆಂಡ್ ಭೇಟಿಯೂ ಆಗಿಲ್ಲ. ಅಲ್ಲದೇ, ಸ್ಥಳೀಯರು ಅನುಮಾನಾಸ್ಪದ" ಚಟುವಟಿಕೆಗಾಗಿ ಆತನ ವಿರುದ್ಧ ದೂರು ದಾಖಲಿಸಿದ ನಂತರ ಸ್ವಲ್ಪ ಸಮಯದವರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ್ದಾರೆ.
ನೆದರ್ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಿಂದ ಬಂಗಾಳದ ನಾಡಿಯಾದವರೆಗೆ ಪ್ರಯಾಣಿಸಿದ ಹೆನ್ರಿಕ್ಸ್, ತಾನು ತುಂಬಾ "ಅವಮಾನ" ಮತ್ತು "ಅಗೌರವ" ಅನುಭವಿಸಿದ್ದು, ಭಾರತಕ್ಕೆ ಮರಳಿ ಬರಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಪ್ರಾಪ್ತ ವಯಸ್ಕಳೆಂದು ತಿಳಿಯದೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯೊಂದಿಗೆ ಸಂಪರ್ಕ ಬೆಳೆಸಿದ ಆಕೆಯನ್ನು ಹೆನ್ರಿಕ್ ಭೇಟಿಯಾಗಲು ನಿರ್ಧರಿಸಿದ್ದು, ಕಳೆದ ಭಾನುವಾರ ಆಂಸ್ಟರ್‌ಡ್ಯಾಮ್‌ನಿಂದ ಪಶ್ಚಿಮ ಬಂಗಾಳದ ನಾಡಿಯಾದ ಟೆಹಟ್ಟಾಗೆ ಬಂದಿದ್ದರು.
ಸಾಕಷ್ಟು ಪ್ರಯತ್ನದ ಹೊರತಾಗಿಯೂ ಆ ಹುಡುಗಿ ಸಿಕ್ಕಿಲ್ಲ. ಸುಮಾರು ಐದರಿಂದ ಆರು ಗಂಟೆಗಳ ಕಾಲ ಹುಡುಕಾಡಿದ್ದಾರೆ. ಹುಡುಗಿಯ ವಿಳಾಸ ಇಲ್ಲದ ಕಾರಣ ಅಕ್ಕಪಕ್ಕದಲ್ಲಿ ಅಲೆದಾಡಿ ಹೈಸ್ಕೂಲ್ ಮುಂದೆ ಗಂಟೆಗಟ್ಟಲೆ ಕಾದಿದ್ದಾರೆ. ಈ ಸಮಯದಲ್ಲಿ ಸ್ಥಳೀಯರಿಂದ ಅನಗತ್ಯ ಪ್ರಶ್ನೆ ಮತ್ತು ಕಿರುಕುಳ ಎದುರಿಸಿದ್ದಾಗಿ ಅವರು ಆರೋಪಿಸಿದರು. ತುಂಬಾ ಅಪಮಾನ ಎದುರಿಸಿದ್ದು, ಟೆಹಟ್ಟಾದ ಜನರು ನಿರ್ದಯಿಗಳು ಎಂದು ಹೆನ್ರಿಕ್ಸ್ ನೋವು ತೋಡಿಕೊಂಡಿದ್ದಾರೆ
ಅನುಮಾನಾಸ್ಪದ ಓಡಾಟದಿಂದ ಪೊಲೀಸರಿಗೆ ಮಾಹಿತಿ:
'ಟೆಹಟ್ಟಾ' ನಾಡಿಯಾದ ಗ್ರಾಮೀಣ ಪ್ರದೇಶವಾಗಿದ್ದು ಅಲ್ಲಿಗೆ ಸಾಮಾನ್ಯವಾಗಿ ಯಾವ ವಿದೇಶಿಗರು ಬರಲ್ಲ. ಅಂತಹುದರಲ್ಲಿ ಹೆನ್ರಿಕ್ ಸುಮಾರು ಐದಾರು ಗಂಟೆಗಳ ಕಾಲ ಅನುಮಾನಾಸ್ಪದವಾಗಿ ಓಡಾಡುವುದನ್ನು ನೋಡಿದ ಸ್ಥಳೀಯರು ಆತನನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಕೆಲವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು.
ಈ ಮಧ್ಯೆ ಗರ್ಲ್ ಫ್ರೆಂಡ್ ನಿವಾಸದ ಬಳಿಗೆ ಹೆನ್ರಿಕ್ ಹೋಗಿದ್ದರಿಂದ ಹುಡುಗಿಯ ತಂದೆ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದರು. ಹಾಗಾಗಿ, ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಅವಿಜಿತ್ ಬಿಸ್ವಾಸ್ ಅವರು ಹೆನ್ರಿಕ್ಸ್ ಅವರನ್ನು ವಿಚಾರಿಸಿದಾಗ ಮಾನ್ಯ ವೀಸಾ ಮತ್ತು ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳು ಮತ್ತು ಗುರುತಿನ ಪುರಾವೆಗಳನ್ನು ಹಾಜರುಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿ ಭೇಟಿಯಾಗದ ನತದೃಷ್ಟ: ಅಲ್ಲದೇ ತಮ್ಮ ಭೇಟಿಯ ಉದ್ದೇಶವನ್ನು ಹಂಚಿಕೊಂಡಿದ್ದು, ಶಾಲಾ ವಿದ್ಯಾರ್ಥಿನಿಯ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಪೊಲೀಸರಿಗೆ ತೋರಿಸಿದ್ದಾರೆ. ವಿಚಾರಣೆ ವೇಳೆ ಯಾವುದೇ ಅನುಮಾನ ಕಂಡುಬರಲಿಲ್ಲ. ವಿದೇಶಿ ಪ್ರಜೆ ಆದ್ದರಿಂದ ಗೌರವ ನೀಡಿದ್ದೇವೆ. ಆದರೆ, ಹುಡುಗಿ ತಂದೆ ಭೇಟಿಯಾಗಲು ಅವಕಾಶ ನೀಡಲಿಲ್ಲ. ಹುಡುಗಿ ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಎಲ್ಲಾ ಪರಿಶೀಲನೆ ಬಳಿಕ ಅವರನ್ನು ಗೌರವದೊಂದಿಗೆ ಕಳುಹಿಸಿಕೊಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂತಹ ಅಮಾನವೀಯ ಅನುಭವವನ್ನು ಯಾವತ್ತೂ ಅನುಭವಿಸಿರಲಿಲ್ಲ. ಫ್ರೆಂಡ್ ಭೇಟಿಗಾಗಿ ಬಂದಿದ್ದೆ. ಆದರೆ ಅದೆಲ್ಲಾ ಈಗ ವ್ಯರ್ಥವಾಯಿತು. ಮುಂದೆ ಯಾವತ್ತೂ ಕೂಡಾ ಭಾರತಕ್ಕೆ ಬರಲ್ಲ. ನಾಳೆ ಭಾರತದಿಂದ ಹೋಗುತ್ತಿರುವುದಾಗಿ ಹೆನ್ರಿಕ್ ತಿಳಿಸಿದ್ದಾರೆ.
Advertisement