
ಶಿಲ್ಲಾಂಗ್: ದೇಶಾದ್ಯಂತ ತೀವ್ರ ಕುತೂಹಲ, ಚರ್ಚೆ ಹಾಗೂ ಆಕ್ರೋಶ ಹುಟ್ಟುಹಾಕಿರುವ ರಾಜಾ ರಘುವಂಶಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಂದ ಒಂದು ಗನ್ ಹಾಗೂ ರೂ. 50,000 ಹಣವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರ್ಬರ್ಟ್ ಪಿನಿಯಾಡ್ ಖಾರ್ಕೊಂಗೊರ್ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಆರೋಪಿಗಳು ಬಳಸಿದ ಕಾರಿನಿಂದ ಒಂದು ಗನ್, ರೂ.50,000 ಹಣ ಸೇರಿದಂತೆ ಒಂದು ಮಾರಕಾಸ್ತ್ರವನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳಾದ ರಾಜ್ ಹಾಗೂ ಆಕಾಶ್ ಬ್ಯಾಗ್ ನಲ್ಲಿ ಶಸ್ತ್ರಾಸ್ತ್ರ ಇರುವುದರ ಬಗ್ಗೆ ಬಾಯ್ಬಿಟ್ಟರು. ಸದ್ಯ ಅವರೆಲ್ಲರೂ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಲ್ಯಾಪ್‌ಟಾಪ್‌ಗಳನ್ನು ಎಸೆಯಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಆದರೆ, ಅವುಗಳನ್ನು ಏಲ್ಲಿ ಎಸೆದಿದ್ದಾರೆ ಅಥವಾ ಬಚ್ಚಿಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಆರೋಪಿಗಳನ್ನು ವಿಚಾರಣೆ ನಡೆಸಲು ಯೋಜಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈ ಮಧ್ಯೆ ಈ ಪ್ರಕರಣದ 8ನೇ ಆರೋಪಿ ಲೋಕೇಂದ್ರ ಸಿಂಗ್ ತೋಮರ್ ನನ್ನು ಮಂಗಳವಾರ ಗ್ವಾಲಿಯರ್ ನ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಆತನಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಲಾಗಿದೆ. ಕೊಲೆ ಪ್ರಕರಣದಲ್ಲಿ ಪಿಸ್ತೂಲ್ ಮತ್ತು ಹಣ ತುಂಬಿದ್ದ ಬ್ಯಾಗ್ ಅನ್ನು ವಿಲೇವಾರಿ ಮಾಡಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಿದ ಆರೋಪ ಆತನ ಮೇಲಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ.
ಲೋಕೇಂದ್ರ ಸಿಂಗ್ ತೋಮರ್ ನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಇಂದೋರ್, ದೆಹಲಿ ಮತ್ತು ಗುವಾಹಟಿ ಮೂಲಕ ಮೇಘಾಲಯದ ಶಿಲ್ಲಾಂಗ್ ಗೆ ಕರೆದೊಯ್ಯಲಾಗುತ್ತದೆ ಎಂದು ಪೊಲೀಸ್ ಠಾಣೆ ಪ್ರಭಾರಿ ರಶೀದ್ ಖಾನ್ ತಿಳಿಸಿದ್ದಾರೆ.
Advertisement