
ನವದೆಹಲಿ: ಅಂತರ್ಜಲದ ವ್ಯರ್ಥ ಮತ್ತು ದುರ್ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈಗ ಕೃಷಿ ಉದ್ದೇಶದ ನೀರಿನ ಬಳಕೆಯ ಮೇಲೆ ತೆರಿಗೆ ವಿಧಿಸಲು ಯೋಜಿಸಿದೆ.
ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ವಿವಿಧ ರಾಜ್ಯಗಳಲ್ಲಿ 22 ಪ್ರಾಯೋಗಿಕ ಯೋಜನೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ಉಪಕ್ರಮದಡಿ ರೈತರಿಗೆ ಸಾಕಷ್ಟು ನೀರು ಸಿಗುತ್ತದೆ ಮತ್ತು ಅದರ ಬಳಕೆಯ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಪ್ರಾಯೋಗಿಕ ಯೋಜನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ತಿಳಿಸಿದ್ದಾರೆ. ಈ ಯೋಜನೆಯಿಂದ ಕೇಂದ್ರ ಸ್ಥಳದಲ್ಲಿ ಸಾಕಷ್ಟು ನೀರನ್ನು ಒದಗಿಸಲಾಗುತ್ತದೆ. ಇದರಿಂದ ರೈತರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬಹುದು. ನೀರಿನ ಬಳಕೆ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ" ಎಂದು ಅವರು ವಿವರಿಸಿದ್ದಾರೆ.
ವಾರ್ಷಿಕ ಅಂತರ್ಜಲ ಹೊರತೆಗೆಯುವಿಕೆ ವರದಿಯ ಪ್ರಕಾರ, 239.16 ಶತಕೋಟಿ ಘನ ಮೀಟರ್ (BCM) ನೀರನ್ನು ಹೊರತೆಗೆಯಲಾಗುತ್ತಿದೆ. ಇದರಲ್ಲಿ ಶೇ. 87 ರಷ್ಟು ಕೃಷಿ ವಲಯ ಹೊಂದಿದೆ. ವಿವೇಚನೆಯಿಲ್ಲದ ಹೊರತೆಗೆಯುವಿಕೆ ಅಂತರ್ಜಲ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ರೂ. 1,600 ಕೋಟಿ ಅನುದಾನ ಹಂಚಿಕೆ ಮಾಡಿದೆ.
ರಾಜ್ಯಗಳು ತೆರಿಗೆ ನಿರ್ಧರಿಸಲಿವೆ. ದುರ್ಬಳಕೆ ತಡೆಯಲು ಇದು ಅಗತ್ಯವಾಗಿದೆ. ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ರಾಜ್ಯಕ್ಕಿಂತ ಸ್ಥಳೀಯ ನೀರು ಬಳಕೆದಾರರ ಸಂಘಗಳು ತೆರಿಗೆ ವಿಧಿಸಬೇಕು' ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಶೋಕ್ ಕೆ ಮೀನಾ ಹೇಳಿದರು.
ಮುಂದಿನ ವರ್ಷ ಮುಕ್ತಾಯಗೊಳ್ಳಲಿರುವ ಗಂಗಾಜಲ ಒಪ್ಪಂದದ ಕುರಿತು ಭಾರತದ ನಿಲುವು ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಟೀಲ್, ಇದು ಅಂತರರಾಷ್ಟ್ರೀಯ ಒಪ್ಪಂದವಾಗಿರುವುದರಿಂದ ದೇಶದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement