
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿನ ಎರಡು ಜಲವಿದ್ಯುತ್ ಯೋಜನೆಗಳ ಕುರಿತು ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪನ್ನು ಪಾಕಿಸ್ತಾನ ಸ್ವಾಗತಿಸಿದೆ. ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದೆ.
ಈ ಹಂತದಲ್ಲಿ ಹೆಚ್ಚಿನ ಆದ್ಯತೆ ಎಂದರೆ, ಭಾರತ ಮತ್ತು ಪಾಕಿಸ್ತಾನ ಸಿಂಧೂ ಜಲ ಒಪ್ಪಂದದ (IWT) ಅನ್ವಯ ಅರ್ಥಪೂರ್ಣ ಸಂವಾದಕ್ಕೆ ಮರಳುವ ಮಾರ್ಗವನ್ನು ಕಂಡುಕೊಳ್ಳುವುದು ಎಂದು ಪಾಕಿಸ್ತಾನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದೊಂದಿಗಿನ ವಿವಾದ ಪರಿಹಾರಕ್ಕಾಗಿ ಚೌಕಟ್ಟನ್ನು ಎಂದಿಗೂ ಗುರುತಿಸಿಲ್ಲ ಎಂದು ಹೇಳುವ ಮೂಲಕ ಭಾರತ, ತೀರ್ಪನ್ನು ನಿನ್ನೆ ತಿರಸ್ಕರಿಸಿತ್ತು.
ಕಿಶೆಂಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನದ ಆಕ್ಷೇಪಣೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿನ ತೀರ್ಪನ್ನು ಉಲ್ಲೇಖಿಸಿ ವಿದೇಶಾಂಗ ಸಚಿವಾಲಯ (MEA) ಹೇಳಿದೆ.
ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಎರಡು ಯೋಜನೆಗಳ ಕೆಲವು ವಿನ್ಯಾಸ ಅಂಶಗಳಿಗೆ ಪಾಕಿಸ್ತಾನ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ ನಂತರ ಭಾರತವು ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ಎಂದಿಗೂ ಗುರುತಿಸಿಲ್ಲ.
ಮತ್ತೊಂದೆಡೆ, ಪಾಕಿಸ್ತಾನವು ಈ ತೀರ್ಪನ್ನು ಪ್ರಮುಖ ಕಾನೂನು ಗೆಲುವು ಎಂದು ಕರೆದಿದ್ದು, ಇದು ಭಾರತವು ಏಕಪಕ್ಷೀಯವಾಗಿ ಒಪ್ಪಂದವನ್ನು ರದ್ದುಮಾಡಲು ಅಥವಾ ಬದಿಗಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ತೋರಿಸುತ್ತದೆ ಎಂದಿದೆ.
Advertisement