
ಮುಂಬೈ: ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮುಂಬೈನ ಕಸ್ಟಮ್ಸ್ ಅತಿಥಿ ಗೃಹದಲ್ಲಿ ಉಳಿದುಕೊಂಡು 'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕವಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಚಂದ್ರಮೋಹನ್ ಸಿಂಗ್ ಬಂಧಿತ ಆರೋಪಿ. ಗೃಹ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡು ಕಸ್ಟಮ್ಸ್ ಸೌಲಭ್ಯದಲ್ಲಿ ಉಳಿದುಕೊಂಡಿದ್ದ. 'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕ ಹೊಂದಿರುವ ಕಾರಿನಲ್ಲಿ ಆತ ಓಡಾಡುತ್ತಿದ್ದ ಎಂದು ಅಧಿಕಾರಿ ಹೇಳಿದರು. ರಸ್ತೆ ನಿಯಮ ಉಲ್ಲಂಘನೆಗಾಗಿ ದಾದರ್‌ನಲ್ಲಿ ಸಂಚಾರಿ ಕಾನ್‌ಸ್ಟೆಬಲ್ ಒಬ್ಬರು ಆ ವ್ಯಕ್ತಿಯನ್ನು ತಡೆದಿದ್ದರು, ಆದರೆ ತಾನು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಎಂದು ಹೇಳಿಕೊಂಡು ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಪೊಲೀಸರು ಶನಿವಾರ ಮಲಾಡ್ ಪ್ರದೇಶದ ಹೋಟೆಲ್‌ನ ಹೊರಗೆ ಚಾಲಕನೊಂದಿಗೆ ಕಾರಿನಲ್ಲಿ ಸಿಂಗ್‌ನನ್ನು ಪತ್ತೆಹಚ್ಚಿದರು. ಆರಂಭದಲ್ಲಿ ಅವರು ಐಎಎಸ್ ಅಧಿಕಾರಿ ಎಂದು ನಟಿಸಿ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದ, ಆದರೆ ತನಿಖೆಯ ಸಮಯದಲ್ಲಿ, ದಾಖಲೆಗಳು ನಕಲಿ ಎಂದು ಅವರು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು.
ಆತನ ಬಳಿ ಮತ್ತೊಂದು ದಾಖಲೆಯೂ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಆ ವ್ಯಕ್ತಿ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆಂದು ಹೇಳಲಾಗಿದೆ ಎಂದು ಅವರು ಹೇಳಿದರು. ಆರೋಪಿಯನ್ನು ಶನಿವಾರ ಬಂಧಿಸಿ ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಈತ ಐಎಎಸ್ ಅಧಿಕಾರಿ ಎಂದು ನಟಿಸುವುದರ ಹಿಂದಿನ ಉದ್ದೇಶವೇನೆಂದು ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
Advertisement