
ಮುಂಬೈ: ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತ ಸಹಾಯಕನ ಬಂಧನದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜಿನಾಮೆ ನೀಡಿದ್ದಾರೆ. ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕರಾಗಿರುವ ಧನಂಜಯ ಅವರು ಪ್ರಸ್ತುತ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು.
ಧನಂಜಯ ಅವರ ಆಪ್ತ ವಾಲ್ಮಿಕ್ ಕರಾಡ್ ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಗಿರುವುದರಿಂದ ರಾಜಿನಾಮೆ ನೀಡುವಂತೆ ಸಿಎಂ ದೇವೇಂದ್ರ ಫಡ್ನವೀಸ್ ಸೂಚಿಸಿದ್ದರು ಎನ್ನಲಾಗಿದೆ.
ಸಂತೋಷ್ ದೇಶ್‌ಮುಖ್ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಧನಂಜಯ ಮುಂಡೆ ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿದ್ದವು. ಬೀಡ್‌ನ ಮಸ್ಸಾಜೋಗ್ ಗ್ರಾಮದ ಸರಪಂಚ್ ಆಗಿದ್ದ ಸಂತೋಷ್ ದೇಶಮುಖ್ ಅವರನ್ನು ಕಳೆದ ವರ್ಷ ಡಿಸೆಂಬರ್ 6ರಂದು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಬೀಡ್ ಜಿಲ್ಲಾ ನ್ಯಾಯಾಲಯಕ್ಕೆ 1,200 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದ ಸಿಐಡಿ, ವಾಲ್ಮಿಕ್ ಕರಾಡ್‌ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಿತ್ತು.
ದೇಶಮುಖ್ ಹತ್ಯೆ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಚಿವರ ಆಪ್ತ ಸಹಾಯಕ ವಾಲಿಕ್‌ಕರದ್ ಆರೋಪಿಯನ್ನಾಗಿ ಹೆಸರಿಸಿರುವ ಕಾರಣ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕಳೆದ ರಾತ್ರಿ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಂತರ ಈ ಬೆಳವಣಿಗೆ ನಡೆದಿದೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುಂಡೆ ಅವರು ಬೀಡ್ ಜಿಲ್ಲೆಯ ಪಾರ್ಲಿಯ ಕ್ಷೇತ್ರದ ಎನ್‌ಸಿಪಿ ಶಾಸಕರಾಗಿದ್ದಾರೆ. ಅವರು ಈ ಹಿಂದೆ ಬೀಡ್‌ನ ಉಸ್ತುವಾರಿ ಸಚಿವರಾಗಿದ್ದರು.
Advertisement