
ಚಂಡೀಗಢ: ಸಂಯುಕ್ತ ಕಿಸಾನ್ ಮೋರ್ಚಾ(SKM) ಮಾರ್ಚ್ 5 ರಂದು 'ಚಂಡೀಗಢ ಚಲೋ'ಗೆ ಕರೆ ನೀಡಿದ್ದು, ನಾಳೆ ಪ್ರತಿಭಟನಾ ಮೆರವಣಿಗೆಗೆ ಸಿದ್ಧವಾಗಿದ್ದ ಹಲವು ರೈತರ ಮುಖಂಡರನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಾರ್ಚ್ 3 ರಂದು ರೈತ ನಾಯಕರು ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಡುವಿನ ಮಾತುಕತೆ ವಿಫಲವಾದ ನಂತರ ರೈತರು 'ಚಂಡೀಗಢ ಚಲೋ'ಗೆ ಕರೆ ನೀಡಿದ್ದಾರೆ.
ಪಂಜಾಬ್ ಪೊಲೀಸರು 'ಮಧ್ಯರಾತ್ರಿ' ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಹಲವಾರು ರೈತ ಸಂಘಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಏತನ್ಮಧ್ಯೆ, ರೈತ ನಾಯಕರನ್ನು ಬಂಧಿಸಿದ್ದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕರು, ಇದು AAP ಸರ್ಕಾರದ ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಆದಾಗ್ಯೂ, ರೈತ ಸಂಘದ ನಾಯಕರು ಪ್ರತಿಭಟನೆಗೂ ಮುಂಚಿತವಾಗಿ ರಾಜ್ಯ ಸರ್ಕಾರದಿಂದ ಇಂತಹ ಕ್ರಮ ನಿರೀಕ್ಷಿಸಿತ ಎಂದಿದ್ದಾರೆ.
"ಪೊಲೀಸರು ಬಂಧಿಸಲು ಬಂದಾಗ ಬೆಳಗ್ಗೆ ಹೆಚ್ಚಿನ ನಾಯಕರು ಮನೆಯಲ್ಲಿ ಇರಲಿಲ್ಲ. ಅವರಲ್ಲಿ ಕೆಲವರನ್ನು ಬಂಧಿಸಲಾಗಿದ್ದರೂ, ದಾಳಿಯ ಸಮಯದಲ್ಲಿ ಅನೇಕ ರೈತ ನಾಯಕರು ಇರಲಿಲ್ಲ" ಎಂದು ರೈತ ಮುಖಂಡರೊಬ್ಬರು ಹೇಳಿದ್ದಾರೆ.
ಪೊಲೀಸರು ಬಂಧಿಸಿದ ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರಲ್ಲಿ ಪ್ರೇಮ್ ಸಿಂಗ್ ಭಂಗು, ರುಲ್ದು ಸಿಂಗ್ ಮಾನ್ಸಾ, ಹರಿಂದರ್ ಸಿಂಗ್ ಲಖೋವಾಲ್, ಮಹೇಶ್ ಚಂದರ್ ಶರ್ಮಾ ಮತ್ತು ಪರಮದೀಪ್ ಸಿಂಗ್ ಬೈದ್ವಾನ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
, ಪಂಜಾಬ್ ಪೊಲೀಸರು ಎಸ್‌ಕೆಎಂ ನಾಯಕರ ನಿವಾಸಗಳ ಮೇಲೆ ಇಂದು ಬೆಳಗಿನ ಜಾವ "ದಾಳಿ" ನಡೆಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್(ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ.
"ಇಂತಹ ಕ್ರಮಗಳಿಂದ ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ವಿವಿಧ ರೈತರ ಬೇಡಿಕೆಗಳನ್ನು ಬೆಂಬಲಿಸಿ ಹೋರಾಡುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
Advertisement