
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪೊಲೀಸ್ ಚೌಕಿ ಮೇಲೆ ಉಗ್ರರು ಗ್ರೆನೇಡ್ ಎಸೆದಿರುವ ಘಟನೆ ನಡೆದಿದೆ. ಉಗ್ರರ ಗ್ರೆನೇಡ್ ದಾಳಿಯಿಂದ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 9:20 ರ ಸುಮಾರಿಗೆ ಬಾರಾಮುಲ್ಲಾದ ಓಲ್ಡ್ ಟೌನ್ ಪೊಲೀಸ್ ಚೌಕಿಯ ಹಿಂಭಾಗದಿಂದ ಸ್ಫೋಟದ ಸದ್ದು ಕೇಳಿಬಂದಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ತಕ್ಷಣವೇ ಇತರ ಭದ್ರತಾ ಏಜೆನ್ಸಿಗಳ ಸಹಯೋಗದೊಂದಿಗೆ ಸ್ಫೋಟ ಸಂಭವಿಸಿದ ಪ್ರದೇಶವನ್ನು ಸುತ್ತುವರೆದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಗ್ರೆನೇಡ್ ಪಿನ್ ಪತ್ತೆಯಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನೆ ಕುರಿತು ಸಂಪೂರ್ಣ ತನಿಖೆ ಆರಂಭಿಸಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement