
ನವದೆಹಲಿ: ತಮಿಳುನಾಡಿನಲ್ಲಿ ಎನ್ಇಪಿ ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ವಾಗ್ಸಮರ ಮುಂದುವರೆದಿದೆ.
ಎನ್ ಇಪಿ ಅಡಿಯಲ್ಲಿ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಯಲು ಅವಕಾಶ ನೀಡದೇ ಇದ್ದರೆ ಅನುದಾನ ಕೊಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ಟ್ಯಾಲಿನ್, ಇದು ಎಲ್ ಕೆಜಿ ವಿದ್ಯಾರ್ಥಿಯೊಬ್ಬ ಪಿ ಹೆಚ್ ಡಿ ಪದವೀಧರನಿಗೆ ಪಾಠ ಮಾಡುತ್ತಿರುವಂತಿದೆ. "ದ್ರಾವಿಡಂ ದೆಹಲಿಯಿಂದ ಆಜ್ಞೆಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಅದು ರಾಷ್ಟ್ರವು ಅನುಸರಿಸಬೇಕಾದ ಮಾರ್ಗವನ್ನು ನಿಗದಿಪಡಿಸುತ್ತದೆ" ಎಂದು ಸ್ಟ್ಯಾಲಿನ್ ಹೇಳಿದ್ದರು.
ಸ್ಟ್ಯಾಲಿನ್ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರ ತಮಿಳಿನಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪರಿಚಯಿಸಬೇಕು. ಡಿಎಂಕೆ ಮುಖ್ಯಸ್ಥರು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿಲ್ಲ ಮತ್ತು ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಕಲ್ಪಿಸಲು ನೇಮಕಾತಿ ನೀತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಂದು ಹೇಳಿದ್ದಾರೆ.
"ಇಲ್ಲಿಯವರೆಗೆ, ಸಿಎಪಿಎಫ್ ನೇಮಕಾತಿಯಲ್ಲಿ ಮಾತೃಭಾಷೆಗೆ ಸ್ಥಾನವಿರಲಿಲ್ಲ. ನಮ್ಮ ಯುವಕರು ಈಗ ತಮಿಳು ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ತಮ್ಮ ಸಿಎಪಿಎಫ್ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ" ಎಂದು ಅಮಿತ್ ಶಾ ಹೇಳಿದ್ದಾರೆ.
"ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯಕ್ರಮವನ್ನು ತಮಿಳು ಭಾಷೆಯಲ್ಲಿ ಪರಿಚಯಿಸುವತ್ತ ಸಾಧ್ಯವಾದಷ್ಟು ಬೇಗ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿಯನ್ನು ಒತ್ತಾಯಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ.
Advertisement