
ರಾಯ್ಪುರ: ಮದ್ಯ ಹಗರಣ ಪ್ರಕರಣದಲ್ಲಿ ಪುತ್ರನ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರ ಆಪ್ತ ಸಹಚರ ಲಕ್ಷ್ಮಿ ನಾರಾಯಣ್ ಬನ್ಸಾಲ್ ಅಲಿಯಾಸ್ ಪಪ್ಪು ಬನ್ಸಾಲ್ ಮತ್ತು ಇತರರ ನಿವಾಸಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ನಿಬಂಧನೆಗಳ ಅಡಿಯಲ್ಲಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚೈತನ್ಯ ಬಘೇಲ್ ತನ್ನ ತಂದೆಯೊಂದಿಗೆ ಭಿಲ್ಲೈ ವಸತಿ ಸೌಕರ್ಯವನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪವಿದೆ. ಮದ್ಯ ಹಗರಣದ ಆರೋಪದ ಭಾಗವಾಗಿ ರಾಜ್ಯದಲ್ಲಿ ಸುಮಾರು 14-15 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ.
ಛತ್ತೀಸ್‌ಗಢ ಮದ್ಯ ಹಗರಣವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿದ್ದು, ಮದ್ಯದ ಸಿಂಡಿಕೇಟ್‌ನ ಫಲಾನುಭವಿಗಳಿಗೆ 2,100 ಕೋಟಿ ರೂಪಾಯಿಗೂ ಹೆಚ್ಚು ಹಣ ತಂದುಕೊಟ್ಟಿದೆ ಎಂದು ಜಾರಿ ನಿರ್ದೇಶನಾಲಯ (ED) ಈ ಹಿಂದೆ ಆರೋಪಿಸಿತ್ತು.
ಈ ಪ್ರಕರಣದಲ್ಲಿ ಕಳೆದ ಜನವರಿ ತಿಂಗಳಲ್ಲಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಕವಾಸಿ ಲಖ್ಮಾ ಅವರನ್ನು ಬಂಧಿಸಲಾಗಿತ್ತು, ರಾಯ್‌ಪುರ ಮೇಯರ್ ಮತ್ತು ಕಾಂಗ್ರೆಸ್ ನಾಯಕ ಐಜಾಜ್ ಧೇಬರ್ ಅವರ ಹಿರಿಯ ಸಹೋದರ ಅನ್ವರ್ ಧೇಬರ್, ಮಾಜಿ ಐಎಎಸ್ ಅಧಿಕಾರಿ ಅನಿಲ್ ತುತೇಜಾ, ಭಾರತೀಯ ದೂರಸಂಪರ್ಕ ಸೇವೆ (ITS) ಅಧಿಕಾರಿ ಅರುಣ್‌ಪತಿ ತ್ರಿಪಾಠಿ ಮತ್ತು ಇತರ ಕೆಲವರನ್ನು ಈ ತನಿಖೆಯ ಭಾಗವಾಗಿ ಬಂಧಿಸಲಾಗಿತ್ತು.
ಮದ್ಯ ಹಗರಣ 2019 ಮತ್ತು 2022 ರ ನಡುವೆ ಛತ್ತೀಸ್‌ಗಢದಲ್ಲಿ ಸಿಎಂ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ತನಿಖೆಯ ಭಾಗವಾಗಿ ವಿವಿಧ ಆರೋಪಿಗಳ ಸುಮಾರು 205 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಸಂಸ್ಥೆಯು ಇಲ್ಲಿಯವರೆಗೆ ಮುಟ್ಟುಗೋಲು ಹಾಕಿಕೊಂಡಿದೆ.
Advertisement