
ಬಿಜಾಪುರ: ತಲೆಗೆ ರೂ. 24 ಲಕ್ಷ ಬಹುಮಾನ ಘೋಷಿಸಲ್ಪಟ್ಟ 9 ಮಂದಿ ಸೇರಿದಂತೆ 17 ನಕ್ಸಲೀಯರು ಛತ್ತೀಸ್ ಗಢದ ಬಿಜಾಪುರದಲ್ಲಿ ಗುರುವಾರ ಶರಣಾಗಿದ್ದಾರೆ.
ಒಂದು ದಂಪತಿ ಸೇರಿದಂತೆ ಕೆಂಪು ಸೇನೆಯ ಎಲ್ಲಾ 17 ಮಂದಿ ಬಿಜಾಪುರದಲ್ಲಿ ಹಿರಿಯ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿಗಳ ಮುಂದೆ ಶರಣಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಳ್ಳು, ಅಮಾನವೀಯ ನಕ್ಸಲ್ ಸಿದ್ಧಾಂತದಿಂದ ನಿರಾಶೆ, ಹಿರಿಯ ನಕ್ಸಲೀಯರಿಂದ ಅಮಾಯಕ ಆದಿವಾಸಿಗಳ ಶೋಷಣೆ ಮತ್ತು ಭದ್ರತಾ ಪಡೆಗಳ ಪ್ರಭಾವ ಹೆಚ್ಚಳ ಶರಣಾಗತಿಗೆ ಕಾರಣವೆಂದು ನಕ್ಸಲೀಯರು ಹೇಳಿರುವುದಾಗಿ ಬಿಜಾಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
ಸರ್ಕಾರದ ನಿಯದ್ ನೆಲ್ಲನಾರ್ ಯೋಜನೆಯಿಂದ ("ನಿಮ್ಮ ಒಳ್ಳೆಯ ಗ್ರಾಮ) ಪ್ರಭಾವಿತರಾಗಿದ್ದರು. ಈ ಯೋಜನೆಯಡಿ ರಾಜ್ಯ ಸರ್ಕಾರ ಹಳ್ಳಿಗಳಲ್ಲಿ ರಸ್ತೆಗಳು, ಆರೋಗ್ಯ ಸೇವೆಗಳು, ನೀರು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾನತೆ ಮತ್ತು ಅಭಿವೃದ್ಧಿಯ ವಾತಾವರಣವನ್ನು ಸೃಷ್ಟಿಸುತ್ತಿದೆ.
ಶರಣಾದ ಎಲ್ಲಾ ಮಾವೋವಾದಿಗಳು ಕಾನೂನುಬಾಹಿರ ಮಾವೋವಾದಿ ಸಂಘಟನೆಯ ಗಂಗಲೂರು ಪ್ರದೇಶ ಸಮಿತಿಯ ವಿವಿಧ ಕೆಲಸಗಳಲ್ಲಿ ಸಕ್ರಿಯರಾಗಿದ್ದರು ಎಂದು ಅವರು ಹೇಳಿದರು.
Advertisement