
ಚಂಢೀಗಡ: ದೇಶದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡುವ ಮೂಲಕ ತನ್ನ ರಾಜಕೀಯ ಎದುರಾಳಿಗಳನ್ನು ಮುಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಆರೋಪಿಸಿದ್ದಾರೆ.
72 ಶಿಕ್ಷಕರನ್ನೊಳಗೊಂಡ ತಂಡವನ್ನು ಫಿನ್ಯಾಂಡ್ ಗೆ ಕಳುಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಮಾನ್, ಕೇಂದ್ರ ಸರ್ಕಾರದ ಅಪ್ರಜಾಸತಾತ್ಮಕ ವಿಧಾನ ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ ಎಂದರು.
ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ದುರ್ಬಲವಾಗಿರುವ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆಯನ್ನು ಯೋಜಿತ ರೀತಿಯಲ್ಲಿ ಇಳಿಸಿ, ಬಿಜೆಪಿ ಪ್ರಾಬಲ್ಯವಿರು ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೇಂದ್ರ ಸರ್ಕಾರದ ಪ್ರಯತ್ನದ ವಿರುದ್ಧ ದೇಶಾದ್ಯಂತ ಸಮಾನ ಮನಸ್ಕ ಪಕ್ಷಗಳು ಹೋರಾಡಬೇಕಾಗಿದೆ ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಎಂ ಮಾನ್, ಪಂಜಾಬ್ ಗಡಿ ರಾಜ್ಯವಾಗಿರುವುದರಿಂದ ಹಲವಾರು ಶತ್ರು ಶಕ್ತಿಗಳಿಂದ ಗುರಿಯಾಗುತ್ತಿದೆ. ಶಾಂತಿಯನ್ನು ಕದಡುವ ಪ್ರಯತ್ನಗಳನ್ನು ಪಂಜಾಬ್ ಪೊಲೀಸರು ಯಶಸ್ವಿಯಾಗಿ ಎದುರಿಸಿದ್ದಾರೆ ಎಂದರು.
ಅಮೃತಸರ ಘಟನೆಯು ರಾಜ್ಯದ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಅಸ್ಥಿರಗೊಳಿಸಲು ಬಯಸುವ ಉಗ್ರರ ಕೈವಾಡವಾಗಿದೆ. ರಾಜ್ಯ ಸರ್ಕಾರ ಅಂತಹ ಎಲ್ಲಾ ಸಂಚುಗಳನ್ನು ವಿಫಲಗೊಳಿಸಲಾಗುವುದು ಎಂದು ಅವರು ಹೇಳಿದರು.
Advertisement