
ಪಾಟ್ನಾ: ಬಿಹಾರದ ಮಾಜಿ ಸಚಿವರ ನಿವಾಸದಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲ್ಪಟ್ಟಿದ್ದ ಕಾನ್‌ಸ್ಟೆಬಲ್ ಒಬ್ಬರನ್ನು ಭಾನುವಾರ ವರ್ಗಾವಣೆ ಮಾಡಲಾಗಿದೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಕಚೇರಿ ಭಾನುವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಮವಸ್ತ್ರದಲ್ಲಿ ನೃತ್ಯ ಮಾಡಿದ್ದಕ್ಕಾಗಿ "ಶಾಸಕ ತೇಜ್ ಪ್ರತಾಪ್ ಯಾದವ್ ಅವರ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಶಾಸಕರ ಭದ್ರತೆಗೆ ಕುಮಾರ್ ಬದಲಿಗೆ ಮತ್ತೊಬ್ಬ ಕಾನ್‌ಸ್ಟೆಬಲ್ ನೇಮಿಸಲಾಗುವುದು" ಎಂದು ತಿಳಿಸಲಾಗಿದೆ.
ಶನಿವಾರ ಹೋಳಿ ಕಾರ್ಯಕ್ರಮದ ವೇಳೆ ಬಿಹಾರ ಮಾಜಿ ಸಚಿವ ತೇಜ್ ಪ್ರತಾಪ್ ಅವರು ಕಾನ್‌ಸ್ಟೆಬಲ್ ಗೆ ಡ್ಯಾನ್ಸ್ ಮಾಡು, ಇಲ್ಲದಿದ್ದರೆ ಅಮಾನತುಗೊಳಿಸಲಾಗುವುದು ಎಂದು ಹೇಳಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಕುಳಿತಿದ್ದ ತೇಜ್ ಪ್ರತಾಪ್, ಕೆಳಗೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಗೆ ಡ್ಯಾನ್ಸ್ ಮಾಡುವಂತೆ ಹೇಳುತ್ತಾರೆ. ಆಗ ಆ ವ್ಯಕ್ತಿ ಕೈ ಮೇಲೆ ಎತ್ತಿ ಕುಣಿಯುವುದನ್ನು ಕಾಣಬಹುದು.
ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಹಿರಿಯ ಪುತ್ರ ಯಾದವ್ ಅವರ ಅಧಿಕೃತ ನಿವಾಸದಲ್ಲಿ ಈ ಘಟನೆ ನಡೆದಿತ್ತು.
Advertisement