
ನವದೆಹಲಿ: ಲಷ್ಕರ್-ಎ-ತೈಬಾ(ಎಲ್‌ಇಟಿ)ದ ಹಿರಿಯ ಕಮಾಂಡರ್ ಮತ್ತು ಹಫೀಜ್ ಸಯೀದ್ ಆಪ್ತ ಸಹಚರ, ಖತಲ್ ಸಿಂಧಿ ಎಂದೂ ಕರೆಯಲ್ಪಡುವ ಅಬು ಖತಾಲ್‌ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೂ ಬೇಕಾಗಿದ್ದ ಅಬು ಖತಾಲ್, ಕಳೆದ ಕೆಲವು ವರ್ಷಗಳಿಂದ ಜಮ್ಮು ಪ್ರದೇಶದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿದೆ.
ಭಾರತೀಯ ಸಂಸ್ಥೆಗಳು ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಪ್ರಕಾರ, 43 ವರ್ಷದ ಉಗ್ರ ಖತಾಲ್ ನನ್ನು ಝೇಲಂ ಜಿಲ್ಲೆಯಲ್ಲಿ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
2002-03 ರಿಂದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಖತಾಲ್, ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್‌ಇಟಿಯ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಖತಾಲ್ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಆಪ್ತರಾಗಿದ್ದರು.
ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವಖೋಡಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರ ಬಸ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ಖತಾಲ್ ಕೂಡ ಭಾಗಿಯಾಗಿದ್ದ. ಈ ದಾಳಿಯಲ್ಲಿ 10 ಜನ ಪ್ರಾಣ ಕಳೆದುಕೊಂಡಿದ್ದರು.
Advertisement