
ನವದೆಹಲಿ: ಇತ್ತೀಚಿನ ಅಮೆರಿಕಾ ಭೇಟಿಯ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ (shashi tharoor) ಈಗ ಮತ್ತೆ ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಾರಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಶಿ ತರೂರ್, ಈ ವಿಷಯವಾಗಿ ಪ್ರಧಾನಿ ಮೋದಿ ಅವರ ನಿಲುವನ್ನು ಮೆಚ್ಚಿಕೊಂಡಿದ್ದಾರೆ.
ನಾನು ಈ ಹಿಂದೆ ರಷ್ಯಾ-ಯುಕ್ರೇನ್ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವನ್ನು ವಿರೋಧಿಸಿದ್ದೆ. ಭಾರತ, ಪ್ರಧಾನಿ ಮೋದಿ ಅವರ ನಿಲುವನ್ನು ನಾನು ತಪ್ಪಾಗಿ ಭಾವಿಸಿದ್ದೆ ಈಗ ನನಗೇ ಮುಜುಗರವಾಗ್ತಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
"ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ತಳೆದ ನಿಲುವುಗಳು ಸ್ವಾಗತಾರ್ಹ. ಸಮಸ್ಯೆ ಪರಿಹಾರಕ್ಕೆ ರಾಜತಾಂತ್ರಿಕ ಮಾತುಕತೆಯೊಂದೇ ಪರಿಹಾರ ಎಂಬ ಪ್ರಧಾನಿ ಮೋದಿ ಅವರ ನಿಲುವು ಮೆಚ್ಚುಗೆಗೆ ಅರ್ಹವಾಗಿದೆ." ಎಂದು ಶಶಿ ತರೂರ್ ಹೇಳಿದ್ದಾರೆ.
ರೈಸಿನಾ ಸಂವಾದದಲ್ಲಿ ಮಾತನಾಡಿದ ಶಶಿ ತರೂರ್, "ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗೆ ಪ್ರಧಾನಿ ಮೋದಿ ಮಾಡಿದ ಪ್ರಯತ್ನಗಳನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರ ಇದು ಯುದ್ಧದ ಯುಗವಲ್ಲ ಎಂಬ ಹೇಳಿಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಸದಾ ಜಾಗತಿಕ ಶಾಂತಿಯ ಪರವಾಗಿ ಕೆಲಸ ಮಾಡುತ್ತಾರೆ. ಇದು ಭಾರತದ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗೌರವ ಹೆಚ್ಚಾಗಲು ಕಾರಣವಾಗಿದೆ.." ಎಂದು ಶಶಿ ತರೂರ್ ಹೇಳಿದ್ದಾರೆ.
"ಜಾಗತಿಕ ಶಾಂತಿಯನ್ನು ಕಾಪಾಡುವಲ್ಲಿ ಭಾರತ ನಡೆಸಿರುವ ಪ್ರಯತ್ನಗಳಿಗೆ ದೊಡ್ಡ ಇತಿಹಾಸವಿದೆ. ಒಂದು ವೇಳೆ ರಷ್ಯಾ-ಉಕ್ರೇನ್ ಯುದ್ಧದ ಎಲ್ಲಾ ಪಾಲುದಾರರು ಭಾರತವನ್ನು ಶಾಂತಿ ಮಾತುಕತೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರೆ, ಭಾರತ ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸ ಇದೆ" ಎಂದು ಶಶಿ ತರೂರ್ ತಿಳಿಸಿದ್ದಾರೆ.
ಮೋದಿ ಅವರ ಅಂತಾರಾಷ್ಟ್ರೀಯ ನಿಲುಗಳನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಗೆ ಈಗ ಶಶಿ ತರೂರ್ ಹೇಳಿಕೆಯಿಂದಾಗಿ ತೀವ್ರ ಮುಜುಗರ ಉಂಟಾಗಿದೆ.
Advertisement