
ಶಿವಪುರಿ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾತಟಿಲಾ ಅಣೆಕಟ್ಟಿನಲ್ಲಿ ದೋಣಿ ಮಗುಚಿ ಬಿದ್ದು ಆರು ಜನ ಮೃತಪಟ್ಟಿದ್ದರು, ಮೂವರು ಮಕ್ಕಳು ಸೇರಿದಂತೆ ಆರು ಜನರ ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಮತ್ತೊಬ್ಬ ಬಾಲಕಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾನಿಯಾಧಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾತಿಟಿಲಾ ಅಣೆಕಟ್ಟಿನ ದ್ವೀಪದಲ್ಲಿರುವ ದೇವಸ್ಥಾನಕ್ಕೆ 15 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಮಂಗಳವಾರ ಸಂಜೆ ಮುಗುಚಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಸ್ಥರ ಸಹಾಯದಿಂದ ಎಂಟು ಜನರನ್ನು ರಕ್ಷಿಸಲಾಗಿದ್ದರೆ, ಇತರ ಏಳು ಜನರು ನೀರಿನಲ್ಲಿ ನಾಪತ್ತೆಯಾಗಿದ್ದರು. ಆ ಪೈಕಿ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಮತ್ತು ಬುಧವಾರ ಮಧ್ಯಾಹ್ನದವರೆಗೆ ಕಾಣೆಯಾದ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಪಿಚೋರ್‌ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ(SDOP) ಪ್ರಶಾಂತ್ ಶರ್ಮಾ ಅವರು ತಿಳಿಸಿದ್ದಾರೆ.
ಕಾಣೆಯಾದ 15 ವರ್ಷದ ಕುಂಕುಮ್ ಎಂಬ ಬಾಲಕಿಗಾಗಿ ಹುಡುಕಾಟ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಮೃತರನ್ನು ಕನ್ಹಾ(7), ಶಿವ(8), ಚೈನಾ(14), ರಾಮದೇವಿ(35), ಲೀಲಾ(40) ಮತ್ತು ಶಾರದಾ(55) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಬದುಕುಳಿದ ರಾಮದೇವಿ, ದೋಣಿಯೊಳಗೆ ಕೆಳಗಿನಿಂದ ನೀರು ನುಗ್ಗಲು ಪ್ರಾರಂಭಿಸಿತು, ಇದರಿಂದಾಗಿ ಅದು ಸ್ವಲ್ಪ ಸಮಯದಲ್ಲೇ ಒಂದು ಬದಿಗೆ ವಾಲಿತು ಎಂದು ಹೇಳಿದ್ದಾರೆ.
ನನಗೆ ಈಜು ಗೊತ್ತಿಲ್ಲದಿದ್ದರೂ, ಹತಾಶೆಯಿಂದ ನೀರಿನಲ್ಲಿ ನ್ನನ್ನ ಕೈಗಳನ್ನು ಬಡಿಯಲು ಪ್ರಾರಂಭಿಸಿದೆ ಮತ್ತು ಸಕಾಲದಲ್ಲಿ ಮತ್ತೊಂದು ದೋಣಿ ರಕ್ಷಿಸಲು ಬಂದಿತು ಎಂದು ಅವರು ತಿಳಿಸಿದ್ದಾರೆ.
Advertisement