
ಚಂಡೀಗಢ: ಪಂಜಾಬ್ ನ ಶಂಭು ಗಡಿಯಿಂದ ಪ್ರತಿಭಟನಾ ನಿರತ ರೈತರನ್ನು ನಿನ್ನೆ ಹೊರಹಾಕಿದ ನಂತರ, ಪಂಜಾಬ್ ರೈತರು ದೆಹಲಿಗೆ ಹೋಗುವುದನ್ನು ತಡೆಯಲು ನಿರ್ಮಿಸಲಾದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಹರಿಯಾಣ ಭದ್ರತಾ ಸಿಬ್ಬಂದಿ ಇಂದು ಗುರುವಾರ ಬೆಳಗ್ಗೆ ತೆಗೆದುಹಾಕಲು ಆರಂಭಿಸಿದರು.
ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಿದ್ದ ಶಂಭು-ಅಂಬಾಲ ರಸ್ತೆಯನ್ನು ತೆರವುಗೊಳಿಸಲು, ಕಾಂಕ್ರೀಟ್ ಬ್ಲಾಕ್ ಗಳನ್ನು ತೆಗೆದುಹಾಕಲು ಜೆಸಿಬಿ ಮತ್ತು ಇತರ ಯಂತ್ರಗಳನ್ನು ನಿಯೋಜಿಸಲಾಗಿದೆ.
'ದೆಹಲಿ ಚಲೋ' ಕಾರ್ಯಕ್ರಮದ ಭಾಗವಾಗಿ ಪಂಜಾಬ್‌ನಿಂದ ರಾಜಧಾನಿಯ ಕಡೆಗೆ ಸಾಗಲು ರೈತರು ಮಾಡುವ ಎಲ್ಲಾ ಪ್ರಯತ್ನವನ್ನು ತಡೆಯಲು ಹರಿಯಾಣ ಭದ್ರತಾ ಅಧಿಕಾರಿಗಳು ಪಂಜಾಬ್‌ನೊಂದಿಗಿನ ರಾಜ್ಯ ಗಡಿಯನ್ನು ಸಿಮೆಂಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳನ್ನು ಹಾಕಿ ಬಲಪಡಿಸಿದ್ದರು.
ಶಂಭು ಗಡಿಯ ಪಂಜಾಬ್ ಬದಿಯಲ್ಲಿರುವ ಉಳಿದ ತಾತ್ಕಾಲಿಕ ರಚನೆಗಳನ್ನು ಕೆಡವಲು ಪಂಜಾಬ್ ಪೊಲೀಸರು ಇಂದು ಕಾರ್ಯಾಚರಣೆಯನ್ನು ಪುನರಾರಂಭಿಸಿ ರಸ್ತೆಯನ್ನು ತೆರವುಗೊಳಿಸಿದರು. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪಂಜಾಬ್ ಪೊಲೀಸರ ದಮನವನ್ನು ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಹೊರಗೆ ಧರಣಿ ನಡೆಸುವುದಾಗಿ ಘೋಷಿಸಿವೆ.
ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ರೈತರ ಪ್ರತಿಭಟನೆಯನ್ನು ಮುನ್ನಡೆಸಿದ ಎರಡೂ ಸಂಸ್ಥೆಗಳು ಪ್ರತಿಭಟನಾಕಾರರನ್ನು ಹೊರಹಾಕಿದ್ದಕ್ಕಾಗಿ ಮತ್ತು ರೈತ ನಾಯಕರನ್ನು ಬಂಧಿಸಿದ್ದಕ್ಕಾಗಿ ಪಂಜಾಬ್‌ನ ಆಮ್ ಆದ್ಮಿ ಪಕ್ಷ (AAP) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕೇಂದ್ರ ನಿಯೋಗದೊಂದಿಗೆ ಸಭೆಯ ನಂತರ ಚಂಡೀಗಢದಲ್ಲಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ನಿನ್ನೆ ಮೊಹಾಲಿಯಲ್ಲಿ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಹಲವಾರು ರೈತ ನಾಯಕರನ್ನು ಪಂಜಾಬ್ ಪೊಲೀಸರು ಬಂಧಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದ ಪ್ರತಿಭಟನಾ ನಿರತ ರೈತರು ಕಳೆದ ವರ್ಷ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು (ಶಂಭು-ಅಂಬಾಲ) ಮತ್ತು ಖಾನೌರಿ (ಸಂಗ್ರೂರ್-ಜಿಂದ್) ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದರು, ಆಗ ಅವರ ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದವು.
Advertisement