
ನವದೆಹಲಿ: 2019 ಮತ್ತು 2024ರ ನಡುವೆ ದೇಶದಲ್ಲಿ ಕೋಮು ಗಲಭೆ ಪ್ರಕರಣಗಳು ಶೇ. 94 ರಷ್ಟು ಹೆಚ್ಚಳವಾಗಿದೆ ಎಂದು AAP ಸಂಸದ ಸಂಜಯ್ ಸಿಂಗ್ ಶುಕ್ರವಾರ ರಾಜ್ಯಸಭೆಯಲ್ಲಿ ಹೇಳಿದರು. ಆಡಳಿತಾರೂಢ ಪಕ್ಷದ ನಾಯಕರ ಪ್ರಚೋದನಾಕಾರಿ ಮತ್ತು ದ್ವೇಷಪೂರಿತ ಹೇಳಿಕೆಗಳಿಗೆ ಇದಕ್ಕೆ ಕಾರಣ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೃಹ ಸಚಿವಾಲಯದ ಕಾರ್ಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಜಯ್ ಸಿಂಗ್, ಇಡೀ ಜಗತ್ತು ವಿಶ್ವವನ್ನು ಅನ್ವೇಷಿಸಲು ಮತ್ತು ಹೊಸ ತಂತ್ರಜ್ಞಾನವನ್ನು ವಿಸ್ತರಿಸಲು ಶ್ರಮಿಸುತ್ತಿರುವಾಗ ಬಿಜೆಪಿ ನಾಯಕರು, ಸಮಾಧಿಗಳನ್ನು ಅಗೆದು, ಮಸೀದಿಗಳ ಕೆಳಗೆ ದೇವಾಲಯಗಳನ್ನು ಹುಡುಕುತ್ತಿದ್ದಾರೆ. ಇಡೀ ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿರುವಾಗ, ಬಿಜೆಪಿ ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ. ಸರ್ಕಾರದಿಂದ ರಕ್ಷಿಸಲ್ಪಟ್ಟ ಮೊಘಲ್ ಯುಗದ ನಿವೇಶನಗಳನ್ನು ಹಾನಿಗೊಳಿಸಲಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ ಎಂದು ಹೇಳಿದರು.
2019 ರಿಂದ 2024 ರವರೆಗಿನ ಕೋಮು ಹಿಂಸಾಚಾರದ ಪ್ರಕರಣಗಳನ್ನು ಹೋಲಿಸಿದರೆ ಶೇ. 94 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಏಕೆ ಕೋಮುಗಲಭೆ ನಡೆಯುತ್ತಿದೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣ ಮತ್ತು ದ್ವೇಷಪೂರಿತ ಹೇಳಿಕೆಗಳಿಗೆ ಇದಕ್ಕೆ ಪ್ರಮುಖ ಕಾರಣ ಎಂದು ಸಿಂಗ್ ಸಂಸತ್ತಿನ ಮೇಲ್ಮನೆಯಲ್ಲಿ ಹೇಳಿದರು
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ ಡೇಟಾ ಉಲ್ಲೇಖಿಸಿ ಮಾತನಾಡಿದ ಸಂಜಯ್ ಸಿಂಗ್, ಇತ್ತೀಚಿಗೆ ಡಬಲ್ ಎಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪಂಜಾಬ್ ಗಿಂತ ಹರಿಯಾಣದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ 2020ರಲ್ಲಿ 6,57,925 ಪ್ರಕರಣ ದಾಖಲಾಗಿತ್ತು. ಆದರೆ 2022ರಲ್ಲಿ 7,53,675 ಪ್ರಕರಣ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರ, ದೆಹಲಿಯಲ್ಲಿಯೂ ಇದೇ ರೀತಿಯ ಪ್ರವೃತ್ತಿಯಿದೆ. ದೆಹಲಿ ಕ್ರಿಮಿನಲ್ ಗಳ ಗುಹೆಯಾಗಿದೆ ಎಂದರು.
ಅಹಮದಾಬಾದ್, ದೆಹಲಿ, ಜೈಪುರ, ಸೂರತ್ ಮತ್ತು ಕಾನ್ಪುರದಲ್ಲಿ ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೆ, ಕೊಚ್ಚಿ, ಕೊಲ್ಕತ್ತಾದಲ್ಲಿ ಕಡಿಮೆಯಾಗಿದೆ. ಅಪರಾಧ ತಡೆಯಲ್ಲಿ ಡಬಲ್ ಎಂಜಿನ್ ಸರ್ಕಾರ ವಿಫಲವಾಗಿರುವುದನ್ನು ಈ ಮಾಹಿತಿಯೇ ತೋರಿಸುತ್ತದೆ ಎಂದು ಸಂಜಯ್ ಸಿಂಗ್ ಹೇಳಿದರು.
Advertisement