
ನವದೆಹಲಿ: ಹಿಂದಿ ಭಾಷೆ ಹೇರಿಕೆ ವಿಚಾರವಾಗಿ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಸಮರ ಜೋರಾಗಿದ್ದು ಇದೀಗ ಕೇಂದ್ರ ಸಚಿವ ಅಮಿತ್ ಶಾ ಡಿಸೆಂಬರ್‌ನಿಂದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಜತೆ ಸ್ಥಳೀಯ ಭಾಷೆಯಲ್ಲಿಯೇ ಪತ್ರ ವ್ಯವಹಾರ ನಡೆಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಕರ್ನಾಟಕ ಸರ್ಕಾರದ ಜತೆ ಕನ್ನಡದಲ್ಲಿ ತಮಿಳುನಾಡು ಸರ್ಕಾರದ ಜತೆ ತಮಿಳು ಹಾಗೂ ಇತರ ರಾಜ್ಯಗಳ ಜತೆ ಅಲ್ಲಿನ ಭಾಷೆಯಲ್ಲೇ ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಸ್ಥಳೀಯ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದು ಮಾತನಾಡಿದ ಅಮಿತ್ ಶಾ ಡಿಸೆಂಬರ್ ಬಳಿಕ ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸತ್ ಸದಸ್ಯರೊಂದಿಗೆ ಅವರದೇ ಭಾಷೆಯಲ್ಲಿ ಪತ್ರವ್ಯವಹಾರ ಮಾಡುವುದಾಗಿ ತಿಳಿಸಿದ್ದಾರೆ.
ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಇದು ಬಲವಾದ ಪ್ರತ್ಯುತ್ತರವಾಗಿದೆ ಎಂದು ಅಮಿತ್ ಶಾ ಹೇಳಿದ್ರು. ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧಿಸುತ್ತದೆ ಎಂಬ ವಿಚಾರಕ್ಕೂ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತಿದ್ದೇವೆ ಅಂತಾರೆ ಇದು ಹೇಗೆ? ನಾನು ಗುಜರಾತ್ ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ವಿರೋಧಿಸಲು ಸಾಧ್ಯ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ರು.
ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ತಮಿಳು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಅಸ್ಸಾಮಿ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಿಗಾಗಿ ‘ಭಾರತೀಯ ಅಧಿಕೃತ ಭಾಷಾ ಇಲಾಖೆ’ಯನ್ನು ಸ್ಥಾಪಿಸಿದೆ ಎಂದು ಶಾ ಹೇಳಿದರು.
ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜಭಾಷಾ ವಿಭಾಗದಲ್ಲಿ ಹೊಸ ಇಲಾಖೆಯನ್ನು ತೆರೆಯಲಾಗಿದೆ. ಅದರ ಅಡಿಯಲ್ಲಿ ಅನುವಾದಕ್ಕೆ ಅನುಕೂಲವಾಗಲು ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ರು.
Advertisement