
ಮೀರತ್: ಪತ್ನಿಯಿಂದಲೇ ಹತ್ಯೆಗೀಡಾದ ಮಾಜಿ ವ್ಯಾಪಾರಿ ನೌಕಾಪಡೆಯ ಅಧಿಕಾರಿ ಸೌರಭ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರ ಕ್ರೌರ್ಯವನ್ನು ಬಹಿರಂಗಪಡಿಸಿದೆ.
ಸೌರಭ್ ರಜಪೂತ್ ಅವರ ದೇಹವನ್ನು ಡ್ರಮ್ ನಲ್ಲಿ ಇಡುವುದಕ್ಕೆ ಸೂಕ್ತವಾಗುವ ರೀತಿಯಲ್ಲಿ ತಲೆಯನ್ನು ದೇಹದಿಂದ ಕತ್ತರಿಸಿ, ಎರಡೂ ಕೈಗಳನ್ನು ಮಣಿಕಟ್ಟಿನಿಂದ ಬೇರ್ಪಡಿಸಿ ಅವರ ಕಾಲುಗಳನ್ನು ಹಿಂದಕ್ಕೆ ಬಾಗಿಸಲಾಗಿದ್ದನ್ನು (ಕಾಲು ಮುರಿದಿರುವುದು) ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ. ಸಾವಿಗೆ ಕಾರಣ ಆಘಾತ ಮತ್ತು ಅತಿಯಾದ ರಕ್ತಸ್ರಾವ ಎಂದು ಹೇಳಲಾಗಿದೆ.
ಮಾರ್ಚ್4 ರಂದು ರಜಪೂತ್ ಅವರನ್ನು ಅವರ ಪತ್ನಿ ಮತ್ತು ಆಕೆಯ ಪ್ರಿಯಕರ ಮಾದಕ ದ್ರವ್ಯ ಕುಡಿಸಿ ಇರಿದು ಕೊಂದಿದ್ದರು. ಈ ಬಳಿಕ ಅವರ ದೇಹವನ್ನು ಛಿದ್ರಗೊಳಿಸಿ ಸಿಮೆಂಟ್‌ನಿಂದ ಡ್ರಮ್‌ನಲ್ಲಿ ಮುಚ್ಚಲಾಯಿತು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ರಜೆಗೆ ತೆರಳಿದ್ದರು. ರಜಪೂತ್ ಅವರ ಕುಟುಂಬಕ್ಕೆ ಅವರ ಫೋನ್‌ನಿಂದ ಸಂದೇಶಗಳನ್ನು ಕಳುಹಿಸುವ ಮೂಲಕ ಅವರನ್ನು ದಾರಿ ತಪ್ಪಿಸಿದರು.
ಮುಸ್ಕಾನ್ ರಸ್ತೋಗಿ, ಸಾಹಿಲ್ ಶುಕ್ಲಾ ತಮ್ಮನ್ನು ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಮಾರ್ಚ್ 10 ರಂದು ಕಸೋಲ್‌ನಲ್ಲಿರುವ ಹೋಟೆಲ್‌ನಲ್ಲಿ ನೆಲೆಸಿ, ಆರು ದಿನಗಳ ಕಾಲ ಅಲ್ಲಿಯೇ ಇದ್ದು, ಮಾರ್ಚ್ 16 ರಂದು ಅಲ್ಲಿಂದ ಹೊಟಿದ್ದರು.
ಕಾರು ಚಾಲಕ ಈ ಇಬ್ಬರ ಚಲನವಲನಗಳ ಬಗ್ಗೆ ಮಾಹಿತಿ ನೀಡಿದ್ದು, ಸಾಮಾನ್ಯವಾಗಿ, ಪ್ರವಾಸಿಗರು ಹೊಸ ಸ್ಥಳಗಳನ್ನು ನೋಡಲು ಮತ್ತು ಸ್ಥಳದ ಸುಂದರತೆಯನ್ನು ಆನಂದಿಸಲು ಕಸೋಲ್‌ಗೆ ಬರುತ್ತಾರೆ, ಆದರೆ ಈ ದಂಪತಿಗಳು ಇಡೀ ದಿನ ತಮ್ಮ ಕೋಣೆಯಲ್ಲಿ (203) ಇರುತ್ತಿದ್ದರು ಮತ್ತು ದಿನಕ್ಕೆ ಒಮ್ಮೆ ಮಾತ್ರ ಕಾರಿನಲ್ಲಿ ಹೊರಗೆ ಹೋಗುತ್ತಿದ್ದರು, ಇದು ಅಸಾಮಾನ್ಯವಾಗಿತ್ತು ಎಂದು ಹೇಳಿದ್ದಾರೆ.
ಅವರು ಯಾರನ್ನೂ ಭೇಟಿಯಾಗಲಿಲ್ಲ, ಹೋಟೆಲ್ ಸಿಬ್ಬಂದಿಗೆ ಕೊಠಡಿಯನ್ನು ಸ್ವಚ್ಛಗೊಳಿಸಲು ಅವಕಾಶ ನೀಡಲಿಲ್ಲ ಮತ್ತು ಸಿಬ್ಬಂದಿಯೊಂದಿಗೆ ಕನಿಷ್ಠ ಸಂವಹನ ನಡೆಸುತ್ತಿದ್ದರು ಎಂದು ಹೋಟೆಲ್ ನಿರ್ವಾಹಕ ಅಮನ್ ಕುಮಾರ್ ಹೇಳಿದ್ದಾರೆ. ಚೆಕ್ ಔಟ್ ಸಮಯದಲ್ಲಿ, ದಂಪತಿಗಳು ಹೋಟೆಲ್ ನಿರ್ವಾಹಕರಿಗೆ ತಾವು ಮನಾಲಿಯಿಂದ ಬಂದಿದ್ದೇವೆ ಮತ್ತು ಉತ್ತರ ಪ್ರದೇಶಕ್ಕೆ ಹಿಂತಿರುಗುತ್ತೇವೆ ಎಂದು ಹೇಳಿದ್ದರು.
ಈ ವಿಷಯವನ್ನು ಮಾರ್ಚ್ 18 ರಂದು ಪೊಲೀಸರಿಗೆ ವರದಿ ಮಾಡಲಾಯಿತು, ನಂತರ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಲಾಯಿತು.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ರಜಪೂತ್ ಅವರ ಹೃದಯಕ್ಕೆ ತೀವ್ರ ಬಲದಿಂದ ಮೂರು ಬಾರಿ ಇರಿದಿದ್ದಾರೆ ಎಂದು ವರದಿ ಮಾಡಿದ್ದಾರೆ. ಮರಣೋತ್ತರ ವರದಿಯಲ್ಲಿ ವ್ಯಕ್ತಿಗೆ ನಿರಂತರ ಮತ್ತು ಹಿಂಸಾತ್ಮಕ ದಾಳಿ ನಡೆದಿರುವುದು ಸ್ಪಷ್ಟವಾಗಿದೆ. "ಚೂಪಾದ ಉದ್ದನೆಯ ಚಾಕುವಿನಿಂದ ಹೊಡೆತಗಳು ಹೃದಯದೊಳಗೆ ಆಳವಾಗಿ ಚುಚ್ಚಲ್ಪಟ್ಟವು" ಎಂದು ವೈದ್ಯರಲ್ಲಿ ಒಬ್ಬರು ಹೇಳಿದ್ದಾರೆ.
ಪೊಲೀಸ್ ಸೂಪರಿಂಟೆಂಡೆಂಟ್ (ನಗರ) ಆಯುಷ್ ವಿಕ್ರಮ್ ಸಿಂಗ್ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ದೃಢಪಡಿಸಿದರು. "ಮುಸ್ಕಾನ್ ಸೌರಭ್ ಅವರ ಹೃದಯಕ್ಕೆ ಕ್ರೂರವಾಗಿ ಇರಿದು, ಅದನ್ನು ಪಂಕ್ಚರ್ ಮಾಡಿದರು. ಅವರ ಕುತ್ತಿಗೆಯನ್ನು ಕತ್ತರಿಸಲಾಯಿತು ಮತ್ತು ಎರಡೂ ಅಂಗೈಗಳನ್ನು ಕತ್ತರಿಸಲಾಯಿತು. ದೇಹವನ್ನು ಡ್ರಮ್‌ನಲ್ಲಿ ಅಳವಡಿಸಲು ನಾಲ್ಕು ತುಂಡುಗಳಾಗಿ ಕತ್ತರಿಸಲಾಯಿತು" ಎಂದು ಅಧಿಕಾರಿ ಹೇಳಿದರು.
"ಮೃತದೇಹವನ್ನು ಡ್ರಮ್‌ನಲ್ಲಿ ಇರಿಸಿ ನಂತರ ಧೂಳು ಮತ್ತು ಸಿಮೆಂಟ್‌ನಿಂದ ತುಂಬಿಸಲಾಗಿತ್ತು. ದೇಹವು ಸಿಮೆಂಟ್‌ನಲ್ಲಿ ಗಟ್ಟಿಯಾಗಿತ್ತು ಮತ್ತು ಗಾಳಿಯ ಕೊರತೆಯಿಂದಾಗಿ ಕೊಳೆಯಲಿಲ್ಲ. ದುರ್ವಾಸನೆ ಬೀರಲಿಲ್ಲ" ಎಂದು ಮರಣೋತ್ತರ ಪರೀಕ್ಷೆ ತಂಡದ ಸದಸ್ಯರೊಬ್ಬರು ಬಹಿರಂಗಪಡಿಸಿದ್ದಾರೆ.
ದೇಹವನ್ನು ಹೊರತೆಗೆಯಲು ಡ್ರಮ್ ನ್ನು ಕತ್ತರಿಸಿ ಗಟ್ಟಿಗೊಳಿಸಿದ ಸಿಮೆಂಟ್ ನ್ನು ತೆಗೆಯಬೇಕಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
Advertisement