
ನವದೆಹಲಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸದನದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಸದನದ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸೋಮವಾರ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಜೆಪಿ ನಡ್ಡಾ ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದೆ.
ಕಾಂಗ್ರೆಸ್ ರಾಜ್ಯಸಭಾ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಇಂದು ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಕಿರಣ್ ರಿಜಿಜು ಅವರ ವಿರುದ್ಧ ನಿಯಮ 188 ರಡಿ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಸದನದಲ್ಲಿ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವುದು ಸವಲತ್ತು ಉಲ್ಲಂಘನೆ ಮತ್ತು ಸದನದ ಹಕ್ಕುಚ್ಯುತಿ ಎಂಬುದು ಇದರಿಂದ ಸ್ಥಾಪಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಿರಣ್ ರಿಜಿಜು ಮತ್ತು ಜೆಪಿ ನಡ್ಡಾ ಅವರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧಂಕರ್ ಅವರಿಗೆ ಸಲ್ಲಿಸಿದ ನೋಟಿಸ್ ನಲ್ಲಿ ತಿಳಿಸಲಾಗಿದೆ.
ನಡ್ಡಾ ಅವರ ಹೇಳಿಕೆಯು "ಸಂಪೂರ್ಣವಾಗಿ ಸುಳ್ಳು, ವಾಸ್ತವಿಕ ಆಧಾರಗಳ ಕೊರತೆ ಇದೆ. ಕಾಂಗ್ರೆಸ್ ಮತ್ತು ಅದರ ನಾಯಕರ ಹೆಸರು ಹಾಳು ಮಾಡುವ ಪೂರ್ವಯೋಜಿತ ಉದ್ದೇಶದಿಂದ ಹೇಳಿಕೆ ನೀಡಲಾಗಿದೆ" ಎಂದು ಜೈರಾಮ್ ರಮೇಶ್ ನೋಟಿಸ್ ನಲ್ಲಿ ಹೇಳಿದ್ದಾರೆ.
ನಾನು ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹೀಗಾಗಿ ಕಿರಣ್ ರಿಜಿಜು ಅವರ ಹೇಳಿಕೆ ಸುಳ್ಳು ಮತ್ತು ದಾರಿತಪ್ಪಿಸುವಂತಿದ್ದು, ಇದು ಸದನದ ಹಕ್ಕುಚ್ಯುತಿ ಮತ್ತು ಸವಲತ್ತುಗಳ ಉಲ್ಲಂಘನೆಯಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಆರೋಪಿಸಿದ್ದರಿಂದ ಗದ್ದಲ, ಕೋಲಾಹಲ ಉಂಟಾಯಿತು. ಲೋಕಸಭೆಯನ್ನು ಪದೇ ಪದೇ ಮುಂದೂಡಲಾಯಿತು.
Advertisement