
ಶಿಮ್ಲಾ: ಶಿಮ್ಲಾದ ಖಾಸಗಿ ಶಾಲೆಯೊಂದು ಸೋಮವಾರ ಈದ್-ಉಲ್-ಫಿತರ್ ಆಚರಣೆಯ ಚಟುವಟಿಕೆಗಳನ್ನು ದಿಢೀರ್ ಬಂದ್ ಮಾಡಿದೆ.
ಈದ್ ಹಬ್ಬದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳು 'ಕುರ್ತಾ-ಪೈಜಾಮ' ಮತ್ತು ಸ್ಮಾಲ್ ಕ್ಯಾಪ್ ಧರಿಸಿ 'ಪನೀರ್', 'ಸೇವಯಾನ್' ಮತ್ತು ಡ್ರೈ ಫ್ರೂಟ್ಸ್ ಹೊಂದಿರುವ 'ರೊಟ್ಟಿ' ರೋಲ್ ತರಬೇಕೆಂದು ಶಾಲೆ ಆಡಳಿತ ಮಂಡಳಿ ಸೂಚಿಸಿತ್ತು. ಈಗ ಏಕಾ ಏಕಿ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಇದು ವಿವಾದಕ್ಕೆ ಕಾರಣವಾಗಿದೆ.
ದೇವ್ ಭೂಮಿ ಸಂಘರ್ಷ ಸಮಿತಿ ಎಂಬ ಸ್ಥಳೀಯ ಸಂಘಟನೆ ಶಿಕ್ಷಣ ಸಂಸ್ಥೆಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ನಂತರ ಶಾಲೆಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಸಾಮಾನ್ಯ ಜನರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಇಂಗ್ಲಿಷ್ ಮಾಧ್ಯಮದ ಆಕ್ಲೆಂಡ್ ಹೌಸ್ ಶಾಲೆ ಈದ್-ಉಲ್-ಫಿತರ್ ಆಚರಣೆಯ ಮೊದಲು ಕೊನೆಯ ಶುಕ್ರವಾರ ಮಾರ್ಚ್ 28 ಕ್ಕೆ ವಿದ್ಯಾರ್ಥಿಗಳಿಗೆ ನಿರ್ದೇಶನಗಳನ್ನು ನೀಡಿತು.
ಆದಾಗ್ಯೂ, ಈ ನಿರ್ಧಾರವನ್ನು ದೇವ್ ಭೂಮಿ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ನಿರ್ದೇಶನಗಳು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.
ಶಾಲೆಯನ್ನು "ಘೇರಾವ್" ಮಾಡುವುದಾಗಿ ಮತ್ತು ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಶಾಲೆ ನಿರ್ಧಾರವನ್ನು ಹಿಂಪಡೆದಿದೆ.
ಹಿಮಾಚಲ ಪ್ರದೇಶದಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು "ದುರದೃಷ್ಟವಶಾತ್" ಪ್ರಯತ್ನ ನಡೆಯುತ್ತಿದೆ ಎಂದು ಸಮಿತಿಯ ಸದಸ್ಯರು ಆರೋಪಿಸಿದ್ದರು ಮತ್ತು ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಆಂದೋಲನವನ್ನು ಪ್ರಾರಂಭಿಸುವುದಾಗಿ ಎಚ್ಚರಿಸಿದ್ದರು.
ಈ ಎಚ್ಚರಿಕೆಯ ಬೆನ್ನಲ್ಲೇ ಶಾಲಾ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡರು ಮತ್ತು "ನಮ್ಮ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಅತ್ಯುನ್ನತ ಆದ್ಯತೆ" ಎಂದು ಹೇಳಿದ್ದಾರೆ.
"ನರ್ಸರಿಯಿಂದ 2 ನೇ ತರಗತಿಯವರೆಗೆ ಈದ್-ಉಲ್-ಫಿತರ್ ಆಚರಣೆಗಳನ್ನು ಯೋಜಿಸಲಾಗಿತ್ತು. ಇದು ನಾವು ಹೋಳಿ, ದೀಪಾವಳಿ ಮತ್ತು ಕ್ರಿಸ್‌ಮಸ್ ಅನ್ನು ಆಚರಿಸುವಂತೆಯೇ ಯುವ ವಿದ್ಯಾರ್ಥಿಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸಲು ಸಹಾಯ ಮಾಡುವ ಪ್ರಯತ್ನಗಳ ಒಂದು ಭಾಗವಾಗಿತ್ತು" ಎಂದು ಶಾಲೆ ಹೇಳಿದೆ.
Advertisement