
ನವದೆಹಲಿ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್ ಚಿತ್ರ 'ಛಾವಾ' ಬಿಡುಗಡೆಯಾದ ದಿನದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವಂತೆಯೇ, ಸಂಸತ್ ಭವನದಲ್ಲಿ ಗುರುವಾರ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು, ಸಂಸದರು ಸಿನಿಮಾವನ್ನು ವೀಕ್ಷಿಸಲಿದ್ದಾರೆ.
ಸಂಭಾಜಿ ಮಹಾರಾಜ ಪಾತ್ರದಲ್ಲಿ ಅಭಿನಯಿಸಿರುವ ವಿಕ್ಕಿ ಕೌಶಲ್ ಸೇರಿದಂತೆ ಇಡೀ ಚಿತ್ರತಂಡ ಪ್ರದರ್ಶನ ವೇಳೆ ಹಾಜರಿರುವ ಸಾಧ್ಯತೆಯಿದೆ.
ಫೆ.14 ರಂದು ಈ ಚಿತ್ರ ದೇಶಾದ್ಯಂತ ತೆರೆ ಕಂಡಿತ್ತು. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನಗಾಥೆಯ ಕಥಾ ಹಂದರ ಹೊಂದಿರುವ ಚಿತ್ರದಲ್ಲಿ ವಿಕ್ಕಿ ಕೌಶಲ್ ಸಂಭಾಜಿ ಪಾತ್ರದಲ್ಲಿ ಮತ್ತು ಆತನ ಪತ್ನಿ ಯಶುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಪ್ರದರ್ಶಿಸಲಾದ 'ದಿ ಸಬರಮತಿ ರಿಪೋರ್ಟ್ ಚಿತ್ರವನ್ನು ಪ್ರಧಾನಿ ಮೋದಿ ಮತ್ತಿತರ ಸಚಿವರು ವೀಕ್ಷಿಸಿದ್ದರು. ಛಾವಾ' ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬಾಕ್ಸ್ ಆಫೀಸ್ ನಲ್ಲಿ ರೂ.780 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿದೆ.
Advertisement