
ರಾಯ್ಪುರ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಸಮವಸ್ತ್ರದಲ್ಲಿದ್ದ ಮೂವರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಬಸ್ತಾರ್ ಪೊಲೀಸರು ತಿಳಿಸಿದ್ದಾರೆ.
ಬಸ್ತಾರ್ ಪೊಲೀಸರ ಪ್ರಕಾರ, ದಾಂತೇವಾಡ-ಬಿಜಾಪುರದ ಅಂತರ-ಜಿಲ್ಲಾ ಅರಣ್ಯ ಗಡಿ ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳ ತಂಡ ಮಾವೋವಾದಿ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿತು.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ, ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಸ್ಫೋಟಕಗಳು ಹಾಗೂ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ.
ನಕ್ಸಲರ ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ. ಸ್ಥಳಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಮತ್ತು ಮಾವೋವಾದಿಗಳ ಸುರಕ್ಷಿತ ಆಶ್ರಯ ತಾಣವೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ.
ಕಾರ್ಯಾಚರಣೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement