
ಜಮ್ಮು: ಕಳೆದ ನಾಲ್ಕು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದ್ದು, ಗುರುವಾರ ರಾಜ್‌ಬಾಗ್‌ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಈ ಎನ್‌ಕೌಂಟರ್ ನಲ್ಲಿ ಸುಮಾರು ಐದು ಭಯೋತ್ಪಾದಕರ ಗುಂಪು ಭಾಗಿಯಾಗಿದ್ದು, ಗುಂಡಿನ ಚಕಮಕಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಭರತ್ ಚಲೋತ್ರಾ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಜಿ) ನೇತೃತ್ವದ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಸೇನೆ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಹಾಯದಿಂದ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ಮಾಹಿತಿ ಸಿಕ್ಕಿದ್ದು ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದಲೂ ಗುಂಡಿನ ದಾಳಿ ನಡೆದಿದ್ದು, ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಎನ್‌ಕೌಂಟರ್ ಮುಗಿದ ನಂತರವೇ ಸ್ಪಷ್ಟ ಚಿತ್ರಣ ಹೊರಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಹಿರಾನಗರ ಸೆಕ್ಟರ್ನಲ್ಲಿ ಒಂದೂವರೆ ಗಂಟೆ ನಡೆದ ಗುಂಡಿನ ದಾಳಿಯಲ್ಲಿನ ಭಯೋತ್ಪಾದಕರ ಗುಂಪೇ ಇಂದಿನ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದೆ. ಇವರು ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ನುಸುಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Advertisement