
ಚೆನ್ನೈ: ತಮಿಳು ನಾಡು ರಾಜಕೀಯ ವಲಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಈಗ ದೆಹಲಿಗೆ ತೆರಳಿದ್ದಾರೆ. ಮುಂದಿನ ವರ್ಷದ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಎಡಿಎಂಕೆ-ಬಿಜೆಪಿ ಮೈತ್ರಿ ಏರ್ಪಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿಬಂದಿವೆ.
ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯ ಸಮಯದಲ್ಲಿ ಮೈತ್ರಿ ಬಗ್ಗೆ ಮಾತನಾಡಿಲ್ಲ ಎಂದು ಪಳನಿಸ್ವಾಮಿ ಹೇಳಿದ್ದರು. ತಮಿಳುನಾಡಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಅಮಿತ್ ಶಾ ಅವರೊಂದಿಗೆ ಚರ್ಚಿಸಿರುವುದಾಗಿ ಅವರು ಹೇಳಿದ್ದಾರೆ.
ತಮಿಳು ನಾಡು ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಿದೆ. ಪರಿಸ್ಥಿತಿಯನ್ನು ಅವಲಂಬಿಸಿ ಮೈತ್ರಿಗಳು ಬದಲಾಗುತ್ತವೆಯೇ ಎಂದು ಕೇಳಿದಾಗ, ಬಿಜೆಪಿಯೊಂದಿಗೆ ಸಂಭಾವ್ಯ ಮೈತ್ರಿಯ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದರು.ಕಳೆದ ಜನವರಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನೈನಾರ್ ನಾಗೇನ್ರನ್ ನೀಡಿದ ಹೇಳಿಕೆಗಳು ಸಾಕಷ್ಟು ಪ್ರಸ್ತುತವಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಚರ್ಚೆ ನಡೆಸುವ ಮೂಲಕ ಮಾತ್ರ ಮೈತ್ರಿ ಸಾಧ್ಯ ಎಂದು ನಾಗೇಂದ್ರನ್ ಹೇಳಿದ್ದಾರೆ. ಪಳನಿಸ್ವಾಮಿ ಅವರ ಸಂಬಂಧಿಕರ ಮೇಲೆ ಇಡಿ ದಾಳಿ ನಡೆಸಿರುವುದು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ತರಲು ಒತ್ತಡ ಹೇರಲು ಬಿಜೆಪಿಯ ತಂತ್ರವೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ತಮಿಳು ನಾಡು ಮಾಜಿ ಸಿಎಂ ಜೆ. ಜಯಲಲಿತಾ ಅವರ ನಾಯಕತ್ವದಲ್ಲಿ ಎಐಎಡಿಎಂಕೆ ಪಕ್ಷ ಹೇಗಿತ್ತೋ ಅದರ ಛಾಯೆಯೇ ಈಗ ಇದೆ. ಅವರ ನಿಧನದ ನಂತರ, ಪಕ್ಷವು ಹಲವಾರು ಬಣಗಳಾಗಿ ವಿಭಜನೆಯಾಗಿ ತಮಿಳು ನಾಡಿನಲ್ಲಿ ತನ್ನ ನೆಲೆಯನ್ನು ಸಾಕಷ್ಟು ಕಳೆದುಕೊಂಡಿದೆ.
ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಕ್ಷೇತ್ರ ಪುನರ್ವಿಂಗಡಣೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರದ ವಿರುದ್ಧ ಹೋರಾಡುತ್ತಿರುವ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಎಐಎಡಿಎಂಕೆಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement