
ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಯರ ಮಸೂದೆ 2025 ಅಂಗೀಕರಿಸಿದ್ದು, ವ್ಯಾಪಾರ, ಶಿಕ್ಷಣ ಮತ್ತು ಹೂಡಿಕೆಗಾಗಿ ಭಾರತಕ್ಕೆ ಬರುವವರಿಗೆ ಸ್ವಾಗತ. ಆದರೆ ಭದ್ರತೆಗೆ ಬೆದರಿಕೆ ಒಡ್ಡುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್ಚರಿಸಿದ್ದಾರೆ.
ಅಮಿತ್ ಶಾ ಅವರು ಮಂಡಿಸಿದ ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ವಾದ-ವಿವಾದಗಳ ಮಧ್ಯೆ ವಿರೋಧ ಪಕ್ಷದ ಸದಸ್ಯರು ಸೂಚಿಸಿದ ತಿದ್ದುಪಡಿಗಳನ್ನು ತಿರಸ್ಕರಿಸಿ, ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಬಲಪಡಿಸಲು, ಉತ್ಪಾದನೆ ಮತ್ತು ವ್ಯಾಪಾರವನ್ನು ಉತ್ತೇಜಿಸಲು, ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮನ್ನಣೆ ಪಡೆಯಲು ಮತ್ತು ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಲು ಈ ಮಸೂದೆ ಅಗತ್ಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಪ್ರಸ್ತಾವಿತ ಮಸೂದೆಯು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಉತ್ತೇಜಿಸುವುದರ ಜೊತೆಗೆ ದೇಶದ ಭದ್ರತೆಯನ್ನು ಬಲಪಡಿಸುತ್ತದೆ. ಆರ್ಥಿಕತೆ ಮತ್ತು ವ್ಯವಹಾರವನ್ನು ಹೆಚ್ಚಿಸುತ್ತದೆ ಎಂದರು.
ಭಾರತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿಯರ ಬಗ್ಗೆ ದೇಶ ನವೀಕೃತ ಮಾಹಿತಿ ಪಡೆಯುವುದನ್ನು ಈ ಮಸೂದೆ ಖಚಿತಪಡಿಸುತ್ತದೆ. ಯಾರೂ ಬೇಕಾದ್ರೂ ಬಂದು ಇಲ್ಲಿರಲು ಈ ದೇಶ ಧರ್ಮಶಾಲೆಯಲ್ಲ. ಯಾರು ಬರುತ್ತಾರೆ, ಯಾವಾಗ ಏಕೆ ಬರುತ್ತಾರೆ ಮತ್ತು ಎಲ್ಲಿ ಉಳಿದುಕೊಳ್ತಾರೆ ಎಂಬುದನ್ನು ತಿಳಿಯುವ ಹಕ್ಕು ಈ ದೇಶಕ್ಕೆ ಇದೆ ಎಂದು ಅಮಿತ್ ಶಾ ಹೇಳಿದರು.
ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಭಾರತ ಉತ್ಪಾದನಾ ಕೇಂದ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದೇಶಿಯರು ಇಲ್ಲಿಗೆ ಬರುವುದು ಸಹಜ. ಆದರೆ ದೇಶದ ವ್ಯವಸ್ಥೆಗೆ ಕೊಡುಗೆ ನೀಡಲು ಬರುವವರಿಗೆ ಸ್ವಾಗತವಿದೆ. ಆದರೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳು ಅಶಾಂತಿ ಸೃಷ್ಟಿಸಲು ಬಂದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಅಮಿತ್ ಶಾ ತಿಳಿಸಿದರು.
ವಲಸೆ ಮತ್ತು ವಿದೇಶಿಯರಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಗಮಗೊಳಿಸಲು ಯತ್ನಿಸುವ ಈ ಮಸೂದೆಯ ಕೆಲವು ನಿಬಂಧನೆಗಳು ವಲಸೆ ಅಧಿಕಾರಿಗಳಿಗೆ "ಅನಿಯಂತ್ರಿತ ಅಧಿಕಾರ" ನೀಡುತ್ತದೆ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದರು ಮತ್ತು ಅದನ್ನು ವಿವರವಾದ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದರು.
ವಲಸೆ ಮತ್ತು ವಿದೇಶಿಯರ ಮಸೂದೆ, 2025 ಅನ್ನು ಈ ತಿಂಗಳ ಆರಂಭದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
Advertisement