
ಅಮೃತ ಸರ: ಪಂಜಾಬ್‌ನ ಅಮೃತಸರದ ಮಜಿತಾ ಪ್ರದೇಶದ ಐದು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ 15 ಜನರು ಸಾವನ್ನಪ್ಪಿದ್ದಾರೆ.10 ಜನರ ಸ್ಥಿತಿ ಗಂಭೀರವಾಗಿದೆ ಎಂದು ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸರಬರಾಜುದಾರ ಮತ್ತು ಆರೋಪಿ ಕಿಂಗ್‌ಪಿನ್ ಸೇರಿದಂತೆ ಆರು ಜನರನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ನಕಲಿ ಮದ್ಯದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.
ಗಂಭೀರ ಸ್ಥಿತಿಯಲ್ಲಿದ್ದವರನ್ನು ಅಮೃತಸರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ವಾಂಡಿ ಘುಮಾನ್ ಎಂಬ ಐದು ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ.
ಮದ್ಯ ವಿತರಣಾ ಜಾಲದ ಕಿಂಗ್‌ಪಿನ್ ಸಾಹಿಬ್ ಸಿಂಗ್ ಮತ್ತು ಮುಖ್ಯ ಪೂರೈಕೆದಾರ ಪ್ರಭ್ಜಿತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತರ ಆರೋಪಿಗಳಾದ ಕುಲ್ಬೀರ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ನಿಂದರ್ ಕೌರ್ ಅವರನ್ನು ಸಹ ಬಂಧಿಸಲಾಗಿದೆ . ಅಮೃತಸರದ ರಾಜಸಾನ್ಸಿ ಪ್ರದೇಶದಿಂದ ಸಾಹಿಬ್ ಅವರನ್ನು ಬಂಧಿಸಲಾಗಿದೆ.
ಅಕ್ರಮ ಮದ್ಯ ಸರಬರಾಜು ಮಾಡುತ್ತಿರುವ ಶಂಕಿತ ಸಂಸ್ಥೆಗಳನ್ನು ಬಂಧಿಸಲು ಪೊಲೀಸ್ ತಂಡಗಳು ಈಗ ರಾಜ್ಯದಿಂದ ಹೊರಗೆ ಹೋಗಿ ತನಿಖೆ ನಡೆಸುತ್ತಿವೆ.
ನಿನ್ನೆ ರಾತ್ರಿ 9:30 ರ ಸುಮಾರಿಗೆ ನಕಲಿ ಮದ್ಯ ಸೇವಿಸಿದ ನಂತರ ಜನರು ಅಸ್ವಸ್ಛರಾಗಿದ್ದು ಹಲವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಅಮೃತಸರ (ಗ್ರಾಮೀಣ) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್ ಹೇಳಿದ್ದಾರೆ.
Advertisement