
ನವದೆಹಲಿ: 43 ರೋಹಿಂಗ್ಯಾ ನಿರಾಶ್ರಿತರನ್ನು ಪೊಲೀಸರು ಬಂಧಿಸಿದ್ದು, ಭಾರತ ಸರ್ಕಾರ ಅವರನ್ನು ಪೋರ್ಟ್ ಬ್ಲೇರ್ ಮೂಲಕ ಮ್ಯಾನ್ಮಾರ್‌ಗೆ ಬಲವಂತವಾಗಿ ಗಡೀಪಾರು ಮಾಡಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹೊಸ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ನಿರಾಶ್ರಿತರ ಗುಂಪನ್ನು ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಅರ್ಧದಲ್ಲಿ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಪ್ರಸ್ತುತ ರೋಹಿಂಗ್ಯಾ ನಿರಾಶ್ರಿತರ ಗಡೀಪಾರು ಮತ್ತು ಜೀವನ ಪರಿಸ್ಥಿತಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.
ಮೇ 8 ರಂದು ವಿಚಾರಣೆ ವೇಳೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನ್ (ಯುಎನ್‌ಹೆಚ್‌ಸಿಆರ್) ಕಾರ್ಡ್‌ಗಳನ್ನು ಹೊಂದಿರುವ ನಿರಾಶ್ರಿತರ ಗುಂಪನ್ನು ಮೇ 7 ರಂದು ತಡರಾತ್ರಿ ಪೊಲೀಸರು ಬಂಧಿಸಿ, ಗಡೀಪಾರು ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಆದರೆ, ನ್ಯಾಯಾಲಯವು ಯಾವುದೇ ಮಧ್ಯಂತರ ನಿರ್ದೇಶನಗಳನ್ನು ನೀಡದೆ, ಈ ವಿಚಾರಣೆಯನ್ನು ಜುಲೈ 31 ಕ್ಕೆ ನಿಗದಿಪಡಿಸಿದೆ.
ಏತನ್ಮಧ್ಯೆ, ದೆಹಲಿಯಲ್ಲಿರುವ ಇಬ್ಬರು ರೋಹಿಂಗ್ಯಾ ನಿರಾಶ್ರಿತರು ಹೊಸ ಪಿಐಎಲ್ ಸಲ್ಲಿಸಿದ್ದು, ತಮ್ಮ ಗುಂಪಿನಲ್ಲಿರುವ ಕೆಲವು ನಿರಾಶ್ರಿತರನ್ನು ಬಯೋಮೆಟ್ರಿಕ್ ಡೇಟಾ ಸಂಗ್ರಹಿಸುವ ನೆಪದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅವರನ್ನು ಕರೆದುಕೊಂಡು ಹೋಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರಿಸಲಾಯಿತು. ನಂತರ, ಅವರನ್ನು ಪೋರ್ಟ್ ಬ್ಲೇರ್‌ಗೆ ವಿಮಾನದಲ್ಲಿ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ಬಲವಂತವಾಗಿ ನೌಕಾಪಡೆಯ ಹಡಗುಗಳಲ್ಲಿ ಕೈಗಳನ್ನು ಕಟ್ಟಿ ಕಣ್ಣುಗಳಿಗೆ ಬಟ್ಟೆ ಕಟ್ಟಿ ಸಾಗಿಸಲಾಗಿದೆ. ಅವರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಇದ್ದರು. ನಿರಾಶ್ರಿತರನ್ನು ಅಂತರರಾಷ್ಟ್ರೀಯ ನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ನಿರಾಶ್ರಿತರಿಗೆ ಲೈಫ್ ಜಾಕೆಟ್‌ಗಳನ್ನು ಬಳಸಿಕೊಂಡು ಹತ್ತಿರದ ತೀರಕ್ಕೆ ಈಜುವಂತೆ ಬಲವಂತ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Advertisement