
ಕೋಲ್ಕತ್ತಾ: ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಪ್ರಯಾಣಿಕರೊಬ್ಬರು ತನ್ನ ಬಳಿ ಬಾಂಬ್ ಇದೆ ಎಂದು ಹೇಳಿದ್ದು, ವಿಮಾನವನ್ನು ಕೋಲ್ಕತ್ತಾ ವಿಮಾನ ನಿಲ್ದಾಣದ ಐಸೋಲೇಷನ್ ಬೇಗೆ ತೆಗೆದುಕೊಂಡು ಹೋಗಿ ಸಂಪೂರ್ಣ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಯ ಭದ್ರತಾ ಅಧಿಕಾರಿಗೆ ತನ್ನ ಬಳಿ ಬಾಂಬ್ ಇದೆ ಎಂದು ತಿಳಿಸಿದ ನಂತರ ಆ ಪ್ರಯಾಣಿಕನನ್ನು ಬಂಧಿಸಲಾಯಿತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಫಾಲ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ 26 ವರ್ಷದ ಪ್ರಯಾಣಿಕ, ಸ್ಟೆಪ್ ಲ್ಯಾಡರ್ ಪಾಯಿಂಟ್ ಚೆಕ್ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದು ವಿಮಾನಯಾನ ಸಿಬ್ಬಂದಿ, ಪ್ರಯಾಣಿಕರು ವಿಮಾನ ಹತ್ತುವ ಮೊದಲು ಪರಿಶೀಲಿಸುವ ದ್ವಿತೀಯ ಹಂತದ ಭದ್ರತಾ ವಿಧಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತ ಪ್ರಯಾಣಿಕ ಇಂಡಿಗೋ ವಿಮಾನದ ಮೂಲಕ ಕೋಲ್ಕತ್ತಾಗೆ ಬಂದಿದ್ದು, ಅದೇ ವಿಮಾನಯಾನ ಸಂಸ್ಥೆಯ ಮತ್ತೊಂದು ವಿಮಾನದಲ್ಲಿ ಮುಂಬೈಗೆ ತೆರಳಬೇಕಿತ್ತು.
ಕೋಲ್ಕತ್ತಾದಿಂದ ಮುಂಬೈಗೆ ಪ್ರಯಾಣಿಸಬೇಕಿದ್ದ ಒಟ್ಟು 186 ಪ್ರಯಾಣಿಕರಲ್ಲಿ 179 ಜನರು ಈಗಾಗಲೇ ಹತ್ತಿದ್ದರು. ಆದರೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ವಿಮಾನವು ಮಧ್ಯಾಹ್ನ 1.30 ಕ್ಕೆ ಮುಂಬೈಗೆ ಹೊರಡಬೇಕಿತ್ತು. ಆದರೆ ವಿಮಾನವನ್ನು ಖಾಲಿ ಮಾಡಿ ಸಂಪೂರ್ಣ ತಪಾಸಣೆಗಾಗಿ ಐಸೋಲೇಷನ್ ಬೇಗೆ ತೆಗೆದುಕೊಂಡು ಹೋಗಲಾಯಿತು ಎಂದು ಅವರು ತಿಳಿಸಿದ್ದಾರೆ.
Advertisement