
ನವದೆಹಲಿ: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ ಜೈಲು ಶಿಕ್ಷೆಗೆ ಗುರಿಯಾದ ನಂತರ ಸಂತ್ರಸ್ತ ಯುವತಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ರದ್ದುಗೊಳಿಸಿದೆ.
ಅತ್ಯಾಚಾರ ಪ್ರಕರಣದ ಅಪರಾಧಿಯ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯಕ್ಕೆ "ಸೂಕ್ತವೆಂದು ಭಾವಿಸುವ ಯಾವುದೇ ಷರತ್ತುಗಳನ್ನು ವಿಧಿಸಿ" ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.
ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ, ಸಂಬಂಧ ಬೆಳೆಸಿಕೊಂಡಿದ್ದ ಆರೋಪಿ ಹಲವಾರು ಬಾರಿ ದೈಹಿಕ ಸಂಬಂಧ ಹೊಂದಿದ್ದರು ಮತ್ತು ಪ್ರತಿ ಬಾರಿಯೂ, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ಆರೋಪಿಸಲಾಗಿದೆ. ನಂತರ, ತನ್ನ ತಾಯಿ ಮದುವೆಗೆ ವಿರೋಧಿಸುತ್ತಾರೆ ಎಂದು ಹೇಳಿ ಸಂತ್ರಸ್ತ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದನು.
ಈ ಸಂಬಂಧ ಮಹಿಳೆ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ಸೆಪ್ಟೆಂಬರ್ 2024 ರಲ್ಲಿ ಅಪರಾಧಿ ಎಂದು ತೀರ್ಪು ನೀಡಿ, ಅತ್ಯಾಚಾರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ವಂಚನೆಗಾಗಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ನಂತರ ಆರೋಪಿ ಈ ತೀರ್ಪು ಪ್ರಶ್ಮಿಸಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ, ಆರೋಪಿ ಮದುವೆಗೆ ಒಪ್ಪಿದ ನಂತರ ಶಿಕ್ಷೆಯನ್ನು ರದ್ದುಗೊಳಿಸಿದೆ. ಅಲ್ಲದೆ ನ್ಯಾಯಾಲಯದ ಕೋಣೆಯೊಳಗೆ ಹಾರ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿತು ಎಂದು ಬಾರ್ ಮತ್ತು ಬೆಂಚ್ ತಿಳಿಸಿದೆ.
Advertisement