
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ ಒಬ್ಬನಾದ ಆಮಿರ್ ನಜೀರ್ ವಾನಿಯ ಭಾವನಾತ್ಮಕ ವೀಡಿಯೊ ಹೊರಬಿದ್ದಿದೆ. ಈ ವಿಡಿಯೋದಲ್ಲಿ, ಅಮೀರ್ ಅವರ ತಾಯಿ ಕೊನೆಯ ಬಾರಿಗೆ ವೀಡಿಯೊ ಕರೆಯಲ್ಲಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ, ಆದರೆ ಅಮೀರ್ ಸ್ಪಷ್ಟವಾಗಿ ಶಸ್ತ್ರಾಸ್ತ್ರ ಕೆಳಗಿಡಲು ನಿರಾಕರಿಸಿದ್ದು ಸೈನ್ಯ ಬರಲಿ, ಆಮೇಲೆ ನೋಡುತ್ತೇನೆ ಎಂದು ಹೇಳಿದ್ದ ಕೆಲ ಕ್ಷಣಗಳಲ್ಲೇ ಸೇನೆಯ ಗುಂಡಿಕ್ಕಿ ಬಲಿಯಾಗಿದ್ದಾನೆ.
ಎನ್ಕೌಂಟರ್ ನಡೆಯುವ ಮೊದಲು ಆಮಿರ್ ತನ್ನ ಸಹಚರರೊಂದಿಗೆ ಅಡಗಿಕೊಂಡಿದ್ದ ಮನೆಯಿಂದ ಈ ವೀಡಿಯೊ ಕರೆಯನ್ನು ಮಾಡಿದ್ದಾನೆ. ಕರೆಯ ಸಮಯದಲ್ಲಿ ಅವನ ತಾಯಿ ಮತ್ತು ಸಹೋದರಿ ಅವನನ್ನು ಮನವೊಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅವನು ಒಪ್ಪಲಿಲ್ಲ. ಇಷ್ಟು ಮಾತ್ರವಲ್ಲದೆ, ಅವನು ತನ್ನ ಸಹ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್ ನ ಸಹೋದರಿಯೊಂದಿಗೆ ಮಾತನಾಡಿದ್ದನು. ಅವಳು ತನ್ನ ಸಹೋದರನ ಬಗ್ಗೆ ಮಾಹಿತಿ ಕೇಳಿದಳು. ಎನ್‌ಕೌಂಟರ್ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಈ ಕರೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಈ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದು, ಅವರನ್ನು ಆಮಿರ್ ನಜೀರ್ ವಾನಿ, ಆಸಿಫ್ ಅಹ್ಮದ್ ಶೇಖ್ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಪುಲ್ವಾಮಾ ನಿವಾಸಿಗಳು. ಈ ಮೂವರೂ ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದರು ಮತ್ತು ದೀರ್ಘಕಾಲದವರೆಗೆ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿದ್ದರು.
ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಈ ಭಯೋತ್ಪಾದಕರಿಗೆ ಶರಣಾಗಲು ಸಂಪೂರ್ಣ ಅವಕಾಶವನ್ನು ನೀಡಿದ್ದವು. ಈ ಹುಡುಗರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮುಖ್ಯವಾಹಿನಿಗೆ ಮರಳಬೇಕೆಂದು ಸೇನೆ ಬಯಸಿತು. ಆದರೆ ಭಯೋತ್ಪಾದಕ ಅಂಶಗಳು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುವ ಮೂಲಕ ಪ್ರತಿಕ್ರಿಯಿಸಿದವು, ಇದು ಎನ್‌ಕೌಂಟರ್‌ಗೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ, ಭದ್ರತಾ ಪಡೆಗಳು ಕ್ರಮ ಕೈಗೊಂಡು ಮೂವರನ್ನೂ ಕೊಂದಿವೆ.
ಟ್ರಾಲ್‌ನಲ್ಲಿರುವ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್ ಮನೆಯನ್ನು ಭದ್ರತಾ ಪಡೆಗಳು ಈಗಾಗಲೇ ಕಾರ್ಯಾಚರಣೆಯಲ್ಲಿ ಸ್ಫೋಟಕಗಳಿಂದ ಸ್ಫೋಟಿಸಿತ್ತು. ಭಯೋತ್ಪಾದಕರಿಗೆ ಸ್ಥಳೀಯ ಬೆಂಬಲ ಸಿಗದಂತೆ ಭಯೋತ್ಪಾದಕ ಅಡಗುತಾಣಗಳನ್ನು ನಾಶಮಾಡುವ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಎನ್‌ಕೌಂಟರ್ ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ಒಳಗೆ ನಡೆದ ಎರಡನೇ ಪ್ರಮುಖ ಕಾರ್ಯಾಚರಣೆಯಾಗಿದೆ. ಇದಕ್ಕೂ ಎರಡು ದಿನಗಳ ಮೊದಲು, ಶೋಪಿಯಾನ್ ಜಿಲ್ಲೆಯ ಕೆಲ್ಲರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಕೊಂದಿತ್ತು. ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಮೂರು ಎಕೆ -47 ರೈಫಲ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement