
ಹೈದರಾಬಾದ್: ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೀರ್ಘ ಇತಿಹಾಸವನ್ನು ಹೊಂದಿದ್ದು ಆ ದೇಶವು ಮಾನವಕುಲಕ್ಕೆ ಅಪಾಯಕಾರಿಯಾಗಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಸರ್ಕಾರವು ಹಲವಾರು ದೇಶಗಳಿಗೆ ಭೇಟಿ ನೀಡಲು ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗಗಳಲ್ಲಿ ಒಬ್ಬರಾದ ಓವೈಸಿ, ಅಂತಾರಾಷ್ಟ್ರೀಯ ಸಮುದಾಯಕ್ಕೆ ತಮ್ಮ ಸಂದೇಶದ ತಿರುಳು ಇದೇ ಆಗಿರುತ್ತದೆ ಎಂದು ಹೇಳಿದರು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ದೀರ್ಘಕಾಲದವರೆಗೆ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವ ಬಗ್ಗೆ ಜಗತ್ತಿಗೆ ತಿಳಿಸಬೇಕಾಗಿದೆ ಎಂದು ಹೈದರಾಬಾದ್ ಸಂಸದ ಓವೈಸಿ ಸಂದರ್ಶನವೊಂದರಲ್ಲಿ ಹೇಳಿದರು.
ಪಾಕಿಸ್ತಾನಿ ಮಾಧ್ಯಮಗಳಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪಾಕಿಸ್ತಾನಿಗಳು ಇಷ್ಟೊಂದು ಸುಂದರ ವ್ಯಕ್ತಿಯನ್ನು ನೋಡಿಲ್ಲ ಎಂದು ಹೇಳಿದರು. ಅವರು ನನ್ನನ್ನು ಭಾರತದಲ್ಲಿ ಮಾತ್ರ ನೋಡುತ್ತಾರೆ. ನನ್ನ ಮಾತನ್ನು ಕೇಳುತ್ತಲೇ ಇರಬೇಕು. ಆಗ ಅವರ ಜ್ಞಾನ ಹೆಚ್ಚಾಗುತ್ತದೆ ಮತ್ತು ಅಜ್ಞಾನ ದೂರವಾಗುತ್ತದೆ. ನಾನು ಇದನ್ನು ಈ ಮೊದಲು ಹೇಳಿದ್ದೇನೆ. ಮತ್ತೊಮ್ಮೆ ಹೇಳುತ್ತಿದ್ದೇನೆ. ನಮ್ಮ ಪ್ರಧಾನಿ ಕದನ ವಿರಾಮವನ್ನು ಘೋಷಿಸಬೇಕಿತ್ತು. ಅಮೆರಿಕ ಅಧ್ಯಕ್ಷರಲ್ಲ ಎಂದು ಓವೈಸಿ ಹೇಳಿದರು. ನಿಮಗೆ ತಿಳಿದಿದೆಯೇ, ಪಾಕಿಸ್ತಾನ ಅಮೆರಿಕದೊಂದಿಗೆ ಕೇವಲ 10 ಬಿಲಿಯನ್ ವ್ಯಾಪಾರ, ಆದರೆ ಭಾರತಕ್ಕೆ ಅದು 150 ಬಿಲಿಯನ್‌ಗಿಂತ ಹೆಚ್ಚು. ಇದು ತಮಾಷೆಯಾ? ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಇನ್ನು ಮುಂದೆ ನಮ್ಮ ವಿರುದ್ಧ ಭಯೋತ್ಪಾದಕ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಖಾತರಿ ನೀಡಬಹುದೇ ಎಂದು ಓವೈಸಿ ಹೇಳಿದರು. ಪಾಕಿಸ್ತಾನ ಸೇನೆ ಯಾವಾಗಲೂ ಭಾರತದೊಂದಿಗೆ ಜಗಳವಾಡುತ್ತದೆ. ನಾವು ಇದನ್ನು ಎಷ್ಟು ದಿನ ಸಹಿಸಿಕೊಳ್ಳುವುದು? ಪಾಕಿಸ್ತಾನದೊಂದಿಗೆ ನೀವು ಹೇಗೆ ವ್ಯವಹಾರ ಮಾಡೋದು? ಅವರು ಭಿಕ್ಷುಕರು. ನಾವು ಅಮೆರಿಕದಿಂದ ನಿರೀಕ್ಷಿಸುತ್ತಿರುವುದು ಟಿಆರ್‌ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂಬುದಷ್ಟೇ ನಮ್ಮ ನಿರೀಕ್ಷೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಭಾರತವು ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಹೈದರಾಬಾದ್ ಸಂಸದರು ಹೇಳಿದರು. ಜಿಯಾ-ಉಲ್-ಹಕ್ ಕಾಲದಿಂದಲೂ ಜನರ ಹತ್ಯಾಕಾಂಡವನ್ನು ನಾವೆಲ್ಲರೂ ನೋಡಿದ್ದೇವೆ. ಆದಾಗ್ಯೂ, ರಾಜತಾಂತ್ರಿಕ ಅಭಿಯಾನದ ಬಗ್ಗೆ ಸರ್ಕಾರ ಇನ್ನೂ ವಿವರವಾದ ಮಾಹಿತಿಯನ್ನು ನೀಡಿಲ್ಲ ಎಂದು ಓವೈಸಿ ಹೇಳಿದರು. ಭಾರತದೊಂದಿಗಿನ ಸಂಘರ್ಷದಲ್ಲಿ ತನ್ನನ್ನು ತಾನು ಇಸ್ಲಾಮಿಕ್ ರಾಷ್ಟ್ರವೆಂದು ಬಿಂಬಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಓವೈಸಿ ಹೇಳಿದರು.
Advertisement