
ಚಂಡೀಗಢ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹಿಸಾರ್ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಶನಿವಾರ ಬಂಧಿಸಲಾಗಿದೆ. ಇದರೊಂದಿಗೆ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಕಳೆದ ಎರಡು ವಾರಗಳಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಒಂಬತ್ತು ಜನರನ್ನು ಬಂಧಿಸದಂತಾಗಿದೆ.
ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್‌ನ ನ್ಯೂ ಅಗರ್ವಾಲ್ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜ್ಯೋತಿ ಅವರು ಯೂಟ್ಯೂಬ್‌ನಲ್ಲಿ 3.77 ಲಕ್ಷ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 1.32 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನಕ್ಕೆ ತಮ್ಮ ಪ್ರಯಾಣದ ಬಗ್ಗೆ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಹಿಸಾರ್ ಪೊಲೀಸರು ಜ್ಯೋತಿ ವಿರುದ್ಧ ಎಫ್‌ಐಆರ್ ದಾಖಲಿಸಿ ವಶಕ್ಕೆ ಪಡೆದು, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಬಿಜೇಂದರ್ ಸಿಂಗ್ ಅವರ ದೂರಿನ ಮೇರೆಗೆ, ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಜ್ಯೋತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಮಲ್ಹೋತ್ರಾ ಅವರು ದೆಹಲಿಯ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರು 2023 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಡ್ಯಾನಿಶ್ ಅವರ ಹ್ಯಾಂಡ್ಲರ್ ಆಗಿ ಕಾರ್ಯನಿರ್ವಹಿಸಿದ್ದರು ಮತ್ತು ಅವರನ್ನು ಐಎಸ್‌ಐ ಕಾರ್ಯಕರ್ತರಿಗೆ ಪರಿಚಯಿಸಿದ್ದರು ಎಂದು ಆರೋಪಿಸಲಾಗಿದೆ.
ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳ ಮೂಲಕ “ಜಟ್ ರಾಂಧವ” ಎಂದು ಅವರ ಸಂಖ್ಯೆಯನ್ನು ಉಳಿಸಿಕೊಂಡಿದ್ದ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಐಎಸ್‌ಐ ಕಾರ್ಯಕರ್ತರೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿಗಳು ನಡೆಯುವಾಗ ಕಾಶ್ಮೀರಕ್ಕೂ ತೆರಳಿದ್ದ ಜ್ಯೋತಿ ಅಲ್ಲಿನ ಸೂಕ್ಷ್ಮ ಸ್ಥಳಗಳಲ್ಲಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಈ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿದ್ದರು ಎನ್ನಲಾಗಿದೆ.
Advertisement