
ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ, ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್ ಅಖ್ತರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದು ವೇಳೆ ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ" ಎಂಬ ಜಾವೇದ್ ಅಖ್ತರ್ ಹೇಳಿಕೆ ಗಮನ ಸೆಳೆದಿದೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದನ್ನು ಉದ್ದೇಶಿಸಿ ಮಾತಣಾಡಿದ ಜಾವೇದ್ ಅಖ್ತರ್, ಭಯೋತ್ಪಾದನೆಗೆ ಆಶ್ರಯ ನೀಡುವ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕುರಿತು ಮಾತನಾಡುವ ಸಂದರ್ಭದಲ್ಲಿ ಅಖ್ತರ್ ಈ ಹೇಳಿಕೆ ನೀಡಿದ್ದಾರೆ. ನರಕಕ್ಕೆ ಹೋಗುವುದು ಅಥವಾ ನೆರೆಯ ದೇಶಕ್ಕೆ (ಪಾಕಿಸ್ತಾನ) ಹೋಗುವ ಎರಡು ಆಯ್ಕೆ ನೀಡಿದರೆ, ನಾನು ನರಕವನ್ನೇ ಆಯ್ದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ
ನನ್ನ ರಾಜಕೀಯ ನಿಲುವುಗಳನ್ನು ಒಪ್ಪದ ಕೆಲವರು ಪಾಕಿಸ್ತಾನಕ್ಕೆ ಹೋಗುವಂತೆ ನನಗೆ ಬೆದರಿಕೆ ಹಾಕುತ್ತಾರೆ. ಆದರೆ ನಾನು ಪಾಕಿಸ್ತಾನಕ್ಕೆ ಹೋಗುವ ಬದಲು ನರಕಕ್ಕೆ ಹೋಗಲು ಇಷ್ಟಪಡುತ್ತೇನೆ. ಏಕೆಂದರೆ ನರಕ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ ಎಂದು ಜಾವೇದ್ ಅಖ್ತರ್ ಮಾರ್ಮಿಕವಾಗಿ ಹೇಳಿದ್ದಾರೆ.
ಕಾಶ್ಮೀರಿಗಳು ಭಾರತಕ್ಕೆ ನಿಷ್ಠರಾಗಿದ್ದು, ಪಾಕಿಸ್ತಾನ ಈಗಾಲಾದರೂ ಕಾಶ್ಮೀರ ಮತ್ತು ಕಾಶ್ಮೀರದ ನಿವಾಸಿಗಳನ್ನು ನೆಮ್ಮದಿಯಿಂದ ಇರಲು ಬಿಡಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಿಕೊಂಡಿದೆ ಎಂದು ಜಾವೇದ್ ಅಖ್ತರ್ ತೀವ್ರ ವಾಗ್ದಾಳಿ ನಡೆಸಿದರು.
ಜಾವೇದ್ ಅಖ್ತರ್ ಅವರು ಮುಂದುವರೆದು, "ಒಂದು ಕಡೆ ನನ್ನನ್ನು 'ಕಾಫಿರ್' ಎಂದು ಕರೆಯುತ್ತಾರೆ ಮತ್ತು ನಾನು 'ಜಹನ್ನಮ್' (ನರಕ) ಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ನನ್ನನ್ನು ಜಿಹಾದಿ ಎಂದು ಕರೆಯುತ್ತಾರೆ ಮತ್ತು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುತ್ತಾರೆ. ಈ ಎರಡೇ ಆಯ್ಕೆಗಳಿದ್ದರೆ, ನಾನು ನರಕಕ್ಕೆ ಹೋಗಲು ಬಯಸುತ್ತೇನೆ. ನಾನು 19 ವರ್ಷದವನಿದ್ದಾಗ ಮುಂಬೈಗೆ ಬಂದೆ. ನಾನು ಏನಾಗಿದ್ದೇನೆಯೋ ಅದು ಈ ನಗರ ಮತ್ತು ಮಹಾರಾಷ್ಟ್ರದಿಂದ" ಎಂದು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಮಾನವೀಯತೆ ಮೇಲೆ ನಡೆದ ಭೀಕರ ದಾಳಿ ಎಂದು ಕರೆದ ಬರಹಗಾರ ಜಾವೇದ್ ಅಖ್ತರ್, ಮನುಷ್ಯ ಮನುಷ್ಯನನ್ನು ಕೊಲ್ಲುವ ಈ ಪ್ರವೃತ್ತಿ ಇಡೀ ಮಾನವ ಕುಲದ ನಾಶಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದರು. ಅಮಾಯಕ ನಾಗರಿಕರನ್ನು ಭೀಕರವಾಗಿ ಕೊಲ್ಲುವುದು ಜಿಹಾದ್ ಎಂದಾದರೆ, ಅಂತಹ ಜಿಹಾದ್‌ನ್ನು ನಾನು ಸಾವಿರ ಬಾರಿ ತಿರಸ್ಕರಿಸುತ್ತೇನೆ ಮತ್ತು ಅದಕ್ಕೆ ವಿರುದ್ಧವಾಗಿ ನಿಲ್ಲುತ್ತೇನೆ" ಎಂದು ಜಾವೇದ್ ಅಖ್ತರ್ ಇದೇ ವೇಳೆ ಗುಡುಗಿದರು.
Advertisement